ADVERTISEMENT

ಹಲಗತ್ತಿ:ಸಾಕ್ಷರತಾ ಕಲಾ ಜಾಥಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:35 IST
Last Updated 26 ಫೆಬ್ರುವರಿ 2012, 9:35 IST

ರಾಮದುರ್ಗ: ತಾಲ್ಲೂಕು ಲೋಕ ಶಿಕ್ಷಣ ಸಮಿತಿ ವತಿಯಿಂದ ಹಲಗತ್ತಿ ಗ್ರಾಮದಲ್ಲಿ `ಸಾಕ್ಷರತಾ ಕಲಾ ಜಾಥಾ~ ಕಾರ್ಯಕ್ರಮದ ಜರುಗಿತು.  ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ಎಂ. ಗೂಳಪ್ಪನವರ ಡೋಲು ಬಾರಿಸುವುದರ ಮೂಲಕ ಚಾಲನೆ ನೀಡಿದರು. 

 ಅವರು ಮಾತನಾಡಿ, ಅನಕ್ಷಸ್ಥರು ಕಲಿಕಾ ಕೇಂದ್ರಗಳಿಗೆ ಹಾಜರಾಗಿ ಓದು, ಬರಹ, ಲೆಕ್ಕಾಚಾರ ಕಲಿಯುವಂತೆ ಪ್ರೇರೇಪಿಸಲು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ಕಲಾ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ 

ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆ ಇದ್ದು, ಕನಿಷ್ಟ ಶೇಕಡಾ 85  ಸಾಕ್ಷರತಾ ಪ್ರಮಾಣ ಹೆಚ್ಚಿಸುವುದು ಸಾಕ್ಷರ ಭಾರತ್ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದರು.ದೇಶದ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ಆರೋಗ್ಯ ಪ್ರಮುಖವಾಗಿದ್ದು, ಎಲ್ಲರೂ ಸಾಕ್ಷರರಾಗಬೇಕೆಂದು ತಿಳಿಸಿದ ಗೂಳಪ್ಪನವರ, ಹಲಗತ್ತಿ ಗ್ರಾಮ ಪಂಚಾಯಿತಿಯನ್ನು ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲು ಗ್ರಾಮದ ಸಾಕ್ಷರತಾ ಪ್ರಮಾಣ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು.

ಸಂಯೋಜಕ ಪಾಂಡುರಂಗ ಜಟಗನ್ನವರ ಮಾತನಾಡಿ, ಬರುವ ಮಾರ್ಚ 18ರಂದು ನವಸಾಕ್ಷರರ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಅದಕ್ಕಾಗಿ ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಕಲಿತ ನವಸಾಕ್ಷರರು ನೋಂದಣಿ ಮಾಡಿಕೊಳ್ಳಬೇಕೆಂದು  ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ಜಿ. ಬಿ. ರಂಗನಗೌಡ್ರ,  ಗ್ರಾಪಂ ಸದಸ್ಯರಾದ ಶಿವಾಜಿ ಮಾಳದಕರ, ಬಾಲಪ್ಪ ರುದ್ರಗೌಡ್ರ, ಅಧ್ಯಕ್ಷ ಕೆ. ವೈ.ಗದಿಗೆನ್ನವರ, ಗ್ರಾ.ಪಂಕಾರ್ಯದರ್ಶಿ ಎಸ್. ಎಂ. ಕುಂಬಾರ, ಗುರಪ್ಪ ಗೋಡಿಕಟ್ಟಿ, ಸರಸ್ವತಿ ಕುಲಕರ್ಣಿ, ಸುರೇಶ ಕಲ್ಲೂರ, ಆರ್. ವಿ. ಪಾಟೀಲ ಹಾಜರಿದ್ದರು.

ಸಾಕ್ಷರತಾ ಕಲಾ ತಂಡದ ಸದಸ್ಯರು `ಸಾವಿಲ್ಲದ ಸಂಪತ್ತು~  ಬೀದಿ ನಾಟಕ ಮತ್ತು ಸಾಕ್ಷರತಾ ಹಾಡುಗಳಿಂದ ಜನರನ್ನು ಜಾಗೃತಗೊಳಿಸಿದರು.ಶಿಕ್ಷಕ ಬಿ. ಎಚ್. ತಿಮ್ಮನಗೌಡ್ರ ಸ್ವಾಗತಿಸಿದರು. ಆರ್. ಆರ್. ಕುಲಕರ್ಣಿ ನಿರೂಪಿಸಿದರು. ಎಸ್. ಎಸ್. ಹಿರೇಮಠ ವಂದಿಸಿದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.