ADVERTISEMENT

ಹೃದ್ರೋಗ ಜಾಗೃತಿಗೆ ಬೃಹತ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 7:11 IST
Last Updated 30 ಸೆಪ್ಟೆಂಬರ್ 2013, 7:11 IST
ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ಆಶ್ರಯದಲ್ಲಿ ಹೃದಯ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಲು ಭಾನುವಾರ ಹಮ್ಮಿಕೊಂಡಿದ್ದ ಜಾಥಾವು ನಗರದ ಕೊಲ್ಲಾಪುರ ರಸ್ತೆಯಲ್ಲಿ ಸಂಚರಿಸಿತು.
ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ಆಶ್ರಯದಲ್ಲಿ ಹೃದಯ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಲು ಭಾನುವಾರ ಹಮ್ಮಿಕೊಂಡಿದ್ದ ಜಾಥಾವು ನಗರದ ಕೊಲ್ಲಾಪುರ ರಸ್ತೆಯಲ್ಲಿ ಸಂಚರಿಸಿತು.   

ಬೆಳಗಾವಿ: ‘ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲ ಜನರು ಐಷಾರಾಮಿ ಜೀವನಕ್ಕೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ಆರೋಗ್ಯವನ್ನು ಕಾಪಾಡಿ­ಕೊಳ್ಳ­ಬೇಕಾದರೆ ಜನರು ದ್ವಿಚಕ್ರ ವಾಹನ ಬಿಟ್ಟು ಮುಂಜಾನೆಯ ನಡಿಗೆ ಕೈಗೊಳ್ಳಬೇಕು’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.

ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಇಲ್ಲಿನ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಆಶ್ರಯ­ದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದು. ಅದನ್ನು ಅತ್ಯಂತ ಕಾಳಜಿಪೂರ್ವಕವಾಗಿ ಕಾಪಾಡಿಕೊಳ್ಳ­ಬೇಕು. ಮದ್ಯಪಾನ ಹಾಗೂ ಧೂಮಪಾನ­ವನ್ನು ತ್ಯಜಿಸಬೇಕು. ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸದ ಸುರೇಶ ಅಂಗಡಿ, ಶಾಸಕ ಸಂಜಯ ಪಾಟೀಲ, ಡಾ. ವಿಶ್ವನಾಥ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ, ಡಾ. ಎಚ್.ಬಿ. ರಾಜಶೇಖರ, ಡಾ. ಸಂಜಯ ಪೋರವಾಲ್‌, ಡಾ. ಪ್ರಸಾದ.ಎಂ.ಆರ್. ಡಾ. ವಿಜಯಾನಂದ ಮೆಟಗುಡಮಠ, ಡಾ. ಸಮೀರ್‌ ಅಂಬರ ಉಪಸ್ಥಿತರಿದ್ದರು. ಹೃದ್ರೋಗ ತಜ್ಞ ಡಾ. ಸುರೇಶ ಪಟ್ಟೇದ ಸ್ವಾಗತಿಸಿದರು. ಡಾ. ಪ್ರಭು ಹಳಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.

ಜಾಥಾ: ಕೆಎಲ್ಇ ವಿಶ್ವವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸ್ವಯಂ ಸೇವಾ ಸಂಘಟನೆಗಳ ಆಶ್ರಯದಲ್ಲಿ ರಾಣಿ ಚನ್ನಮ್ಮ ವೃತ್ತದಿಂದ ಕೆಎಲ್‌ಇ ಆಸ್ಪತ್ರೆಯವರೆಗೆ ಹೃದಯ ಆರೋಗ್ಯದ ಕುರಿತು ಅರಿವು ಮೂಡಿಸುವ ಜಾಥಾ ನಡೆಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರು ಜಾಥಾದಲ್ಲಿ ಪಾಲ್ಗೊಂಡು ಹೃದ್ರೋಗದ ಕುರಿತು ಜನಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.