ADVERTISEMENT

ಪ್ರಕರಣ ದಾಖಲಿಸದ ಎಸಿಬಿ ಅಧಿಕಾರಿಗಳ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 12:52 IST
Last Updated 5 ಜನವರಿ 2022, 12:52 IST

ಬೆಳಗಾವಿ: ‘ಮೊಟ್ಟೆ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಾಖಲೆಗಳ ಸಮೇತ ದೂರು ನೀಡಿದ್ದರೂ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬೆಳಗಾವಿಯ ಅಧಿಕಾರಿಗಳ ವಿರುದ್ಧ 4ನೇ ಜೆಎಂಎಫ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ’ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.

‘ಹಾಲಿ ಮುಜರಾಯಿ ಸಚಿವೆ ಶಶಿಕಲಾ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನಿರ್ವಹಿಸುತ್ತಿದ್ದ ವೇಳೆ ಮೊಟ್ಟೆ ಖರೀದಿಯಲ್ಲಿ ಭಾರಿ ಪ್ರಮಾಣದ ಕಮಿಷನ್‌ಗಾಗಿ ಬೇಡಿಕೆ ಇಟ್ಟ ಪ್ರಕರಣಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ 2021ರ ಜುಲೈ 26ರಂದು ಎಸಿಬಿಗೆ ದೂರು ನೀಡಲಾಗಿತ್ತು’ ಎಂದಿದ್ದಾರೆ.

‘ದೂರಿನ ವಿಚಾರಣೆ ಮುಂದುವರಿಸಲು ಸಕ್ಷಮ ಪ್ರಾಧಿಕಾರದಿಂದ ಪ್ರಾಥಮಿಕ ವಿಚಾರಣೆಗೆ ಅನುಮತಿ ಪಡೆಯುವುದು ಅವಶ್ಯವಿದ್ದು, ಕುಟುಕು ಕಾರ್ಯಾಚರಣೆಯ (ವಾಹಿನಿಯೊಂದು ನಡೆಸಿದ್ದ) ಮೂಲ ದೃಶ್ಯವನ್ನು 3 ದಿನಗಳಲ್ಲಿ ಕೊಡುವಂತೆ ಎಸಿಬಿ ಅಧಿಕಾರಿಗಳು ಜುಲೈ 29ರಂದು ನೋಟಿಸ್ ಕೂಡ ನೀಡಿದ್ದರು. ಆ ಪ್ರಕಾರ ಮೂಲ ದೃಶ್ಯ ನೀಡಿದ ನಂತರ ಸೆ.1ರಂದು ನೋಟಿಸ್ ಕೊಟ್ಟು, ವಿವರಣೆ ನೀಡಲು ಮತ್ತು ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದ್ದರು. ಆದರೆ, ಹಗರಣದಲ್ಲಿ ಭಾಗಿಯಾದ ಆರೋಪಿಗಳಾದ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರ ಮೇಲೆ ಪ್ರಕರಣ ದಾಖಲಿಸಿಲ್ಲ. ಆರೋಪಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಎಫ್‌ಐಆರ್‌ ದಾಖಲಿಸದೆ ತಪ್ಪು ಎಸಗಿದ್ದಾರೆ. ಹೀಗಾಗಿ, ಕಲಂ 166ರ ಎ ಪ್ರಕಾರ ಎಸಿಬಿ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ವಕೀಲ ಜೆ.ಎಂ. ಹತ್ತರಕಿ ಅವರು ವಕಾಲತ್ತು ವಹಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಜ.20ಕ್ಕೆ ನಿಗದಿಪಡಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.