ಬೆಳಗಾವಿ ಶುಕ್ರವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಮತ್ತು ವಿಜಯಪುರದ ಸೀಕ್ಯಾಬ್ ಸಂಸ್ಥಾಪಕ ಅಧ್ಯಕ್ಷ ಶಮಸುದ್ದೀನ್ ಅಬ್ದುಲ್ಲಾ ಪುಣೇಕರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಜಲಯುದ್ಧಗಳ ಯುಗಕ್ಕೆ, ಪರಿಸರ ನಿರ್ಣಾಮದ ಯುಗಕ್ಕೆ, ಭೌತಿಕ– ಡಿಜಿಟಲ್ ಪರಿವರ್ತನೆಯ ಯುಗಕ್ಕೆ ಪ್ರಸಕ್ತ ಶತಮಾನವೇ ನಾಂದಿಯಾಗುವ ಮುನ್ಸೂಚನೆಗಳು ಕಾಣಿಸುತ್ತಿವೆ. ಇಂಥದರಲ್ಲಿ ಶಿಕ್ಷಣವಂತರ ಜವಾಬ್ದಾರಿ ಏನೆಂದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಮುಂಬೈನ ಸೋಮಯ್ಯ ವಿದ್ಯಾವಿಹಾರ ವಿಶ್ವವಿದ್ಯಾಲಯದ ಭಾಷೆ ಮತ್ತು ಸಾಹಿತ್ಯ ವಿಭಾಗದ ಡೀನ್ ಪ್ರೊ.ಗಣೇಶ ಎನ್. ದೇವಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ವಿಟಿಯು ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಅವರು ವರ್ಚುವಲ್ ಭಾಷಣ ಮಾಡಿದರು.
‘ಪ್ರಸ್ತುತ ಶತಮಾನವನ್ನು ಜ್ಞಾನದ ಶತಮಾನ ಎಂದು ಕರೆಯುತ್ತೇವೆ. ಆದರೆ, ಶತಮಾನದ ಅಂತ್ಯದವರೆಗೂ ಇದು ಜ್ಞಾನದ ಪರಿಧಿಯಲ್ಲೇ ಇರುತ್ತದೆಯೇ ಎಂದು ಹೇಳುವುದು ಕಷ್ಟವಾಗಿದೆ. ಏಕೆಂದರೆ, ಈ ಹಿಂದೆ ‘ಕತ್ತಲೆಯ ಯುಗ’, ‘ವೈಚಾರಿಕತೆಯ ಯುಗ’ ಎಂದು ಪರಿಗಣಿಸಿದ್ದೆಲ್ಲವೂ ಪಲ್ಲಟಗೊಂಡಿವೆ. ಬಹುಶಃ ಜ್ಞಾನದ ಯುಗ ಕೂಡ ಮಾಹಿತಿಯ ಸ್ಫೋಟವಾಗಿರಬಹುದು ಅಥವಾ ಅಗಾಧ ತಂತ್ರಜ್ಞಾನದ ಭ್ರಾಮುಕ ಲೋಕವಾಗಿರಬಹುದು’ ಎಂದೂ ಅವರು ವಿಶ್ಲೇಷಿಸಿದರು.
‘ವಿಶ್ವದ ಜನಸಂಖ್ಯೆ 820 ಕೋಟಿ. ಇದರಲ್ಲಿ ಭಾರತೀಯರೇ 145 ಕೋಟಿ. ಅಂದರೆ ಪ್ರತಿ ಆರು ಜನರಲ್ಲಿ ಒಬ್ಬ ಭಾರತೀಯ ಇದ್ದಾನೆ. 15ರಿಂದ 25 ವರ್ಷ ವಯೋಮಾನದವರ ಸಂಖ್ಯೆ ಜಗತ್ತಿನಲ್ಲಿ 120 ಕೋಟಿ ಇದ್ದರೆ; ಭಾರತಲ್ಲೇ 25 ಕೋಟಿಗೂ ಅಧಿಕ ಇದೆ. ಅಂದರೆ; ಜಗತ್ತಿನ ಪ್ರತಿ ಐವರು ಯುವಜನರಲ್ಲಿ ಒಬ್ಬರು ಭಾರತೀಯ. ಯುವಪೀಳಿಗೆ ಜಗತ್ತಿಗೆ ಹೊಸ ರೂಪ ಕೊಡಬೇಕಿದೆ. ಇದರಲ್ಲಿ ಭಾರತೀಯರೇ ಹೊರಬೇಕಾದ ಹೊಣೆಗಾರಿಗೆ ದೊಡ್ಡದು’ ಎಂದರು.
‘ಭಾರತದಲ್ಲಿ ಶಾಲೆಗೆ ದಾಖಲಾದ 100 ಮಕ್ಕಳ ಪೈಕಿ 28 ಮಂದಿ ಮಾತ್ರ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ ಶೇ 80ರಷ್ಟು ಯುವಜನರು ಪದವಿಗೆ ಮುಕ್ತಾಯಗೊಳಿಸಿದ್ದು, ಶೇ 20ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅಂದರೆ; ಶಾಲೆಗೆ ಬಂದ 100 ಮಕ್ಕಳ ಪೈಕಿ ಐವರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದ 95 ಮಂದಿಯ ಕಥೆ ಏನೆಂದು ತಿಳಿಯಬೇಕಿದೆ’ ಎಂದರು.
‘ಇಷ್ಟೆಲ್ಲ ದಾಟಿ ಬಂದ ಪದವೀಧರರು ಕೇವಲ ಹಣ ಗಳಿಕೆಯ ಯಂತ್ರಗಳಾದರೆ ಏನು ಪ್ರಯೋಜನ? ವಿದ್ಯಾರ್ಥಿಗಳ ಜ್ಞಾನದಿಗಂತವನ್ನು ಹೆಚ್ಚಿಸದ ಅಧ್ಯಾಪಕ ಏನು ಪ್ರಯೋಜನ? ಇವರಿಬ್ಬರೂ ಸಮಾಜಕ್ಕೆ ಕಳಂಕವೆಂದೇ ನಾನು ಭಾವಿಸುವೆ’ ಎಂದೂ ಅವರು ಹೇಳಿದರು.
ಘಟಿಕೋತ್ಸವ ಭಾಷಣ ಮಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ, ‘ವಿಶ್ವವಿದ್ಯಾಲಯಗಳು ಕೇವಲ ಪದವೀಧರರನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳಲ್ಲ. ಅವು ಜ್ಞಾನ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪೋಷಿಸುವ ಕೇಂದ್ರಗಳಾಗಬೇಕು’ ಎಂದರು.
‘ಸಂಶೋಧನೆ ಮತ್ತು ನಾವಿನ್ಯತೆ ಉನ್ನತ ಶಿಕ್ಷಣದ ಪ್ರಮುಖ ಅಂಶಗಳವಾಗಿವೆ. ನಮ್ಮ ದೇಶದ ಪ್ರಗತಿಯ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸುವ, ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಹೊಸತನವನ್ನು ಕಂಡುಕೊಳ್ಳುವ ಪ್ರಕ್ರಿಯೆಗಳು ವಿಶ್ವವಿದ್ಯಾಲಯದಿಂದಲೇ ಆಗಬೇಕಿದೆ’ ಎಂದರು.
ಇದೇ ವೇಳೆ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಮತ್ತು ವಿಜಯಪುರದ ಸೀಕ್ಯಾಬ್ ಸಂಸ್ಥಾಪಕ ಅಧ್ಯಕ್ಷ ಶಮಸುದ್ದೀನ್ ಅಬ್ದುಲ್ಲಾ ಪುಣೇಕರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಬೆಳಗಾವಿಯಲ್ಲಿ ಶುಕ್ರವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಲ್ಲಿ ಪ್ರಥಮ ರ್‍ಯಾಂಕ್ ಜತೆಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ..
46,013 ವಿದ್ಯಾರ್ಥಿಗಳು ಪದವಿ, 2,866 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದವರಿಗೆ, ಚಿನ್ನದ ಪದಕ ಪಡೆದವರಿಗೆ ಪದಕ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿ.ವಿ ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಹಾಗೂ ವಿವಿಧ ವಿಭಾಗಗಳ ಡೀನ್‌ಗಳು ವೇದಿಕೆ ಮೇಲಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.