ADVERTISEMENT

ಅಬನಾಳಿ ಗ್ರಾಮ: ಒಂದೇ ದಿನ 144 ಕೋವಿಡ್‌ ಪ್ರಕರಣ ಪತ್ತೆ

ವಾಸ್ತವ ಸ್ಥಿತಿ ಮರೆಮಾಚಿದ್ದ ಗ್ರಾಮಸ್ಥರು: ಮಹಾರಾಷ್ಟ್ರದಿಂದ ಬಂದವರಿಂದ ರೋಗ ಲಕ್ಷಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 20:22 IST
Last Updated 20 ಏಪ್ರಿಲ್ 2021, 20:22 IST
ಖಾನಾಪುರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹರೀಶಕುಮಾರ್ ಮಂಗಳವಾರ ಸಂಜೆ ಆರೋಗ್ಯ, ಕಂದಾಯ, ಪೊಲೀಸ್ ಮತ್ತು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
ಖಾನಾಪುರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹರೀಶಕುಮಾರ್ ಮಂಗಳವಾರ ಸಂಜೆ ಆರೋಗ್ಯ, ಕಂದಾಯ, ಪೊಲೀಸ್ ಮತ್ತು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಶಿರೋಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಬನಾಳಿ ಗ್ರಾಮದಲ್ಲಿ ಮಂಗಳವಾರ ಒಟ್ಟು 144 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಡೀ ಗ್ರಾಮವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ತಾಲ್ಲೂಕಿನ ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಏ.5 ಮತ್ತು 6ರಂದು ಜರುಗಿದ ಗ್ರಾಮದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದ ಬಹುತೇಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇವರೆಲ್ಲರೂ ಮಹಾರಾಷ್ಟ್ರದ ವಿವಿಧ ನಗರಪ್ರದೇಶಗಳಿಗೆ ಉದ್ಯೋಗಸ್ಥರಾಗಿದ್ದು ಜಾತ್ರೆಯಲ್ಲಿ ಭಾಗವಹಿಸಲು ಗ್ರಾಮಕ್ಕೆ ಮರಳಿದ್ದರು.

ಜಾತ್ರೆಯಿಂದ ಮರಳಿದ ಗ್ರಾಮಸ್ಥರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದರಿಂದ ಅವರು ದೂರದ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದು ಬಳಿಕ ಚೇತರಿಸಿಕೊಂಡಿದ್ದರು.

ADVERTISEMENT

ಅನಾರೋಗ್ಯಕ್ಕೆ ಕಾರಣ ವಿಚಾರಿಸಿದ ವೈದ್ಯರಿಗೆ ಗ್ರಾಮಸ್ಥರು, ಮಹಾರಾಷ್ಟ್ರದಿಂದ ಮರಳಿದ್ದ ವಿಷಯವನ್ನು ಮರೆಮಾಚಿದ್ದರು.

ಆದರೆ ನಿಯಮದ ಪ್ರಕಾರ, ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಎಲ್ಲರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದರಿಂದ ಗ್ರಾಮಸ್ಥರಲ್ಲಿ ಕೋವಿಡ್-19 ದೃಢಪಟ್ಟಿರುವುದು ಪತ್ತೆಯಾಗಿದೆ.

ಅಬನಾಳಿ ಗ್ರಾಮಕ್ಕೆ ಭೇಟಿ ಜಿಲ್ಲಾಧಿಕಾರಿ ಹರೀಶಕುಮಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ತುರ್ತು ಸಭೆ ನಡೆಸಿದರು.

‘ಅಬನಾಳಿ ಗ್ರಾಮಸ್ಥರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಅಸ್ವಸ್ಥರಾಗಿದ್ದ ಎಲ್ಲರೂ ಈಗ ಗುಣಮುಖರಾಗಿದ್ದಾರೆ. ವೈದ್ಯರ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.