ADVERTISEMENT

16 ಸಾವಿರ ಪ್ರಕರಣಗಳು ರಾಜಿಗೆ ಯೋಗ್ಯ: ಪ್ರಧಾನ ಜಿಲ್ಲಾ ನ್ಯಾಯಾಧೀಶ

ಮೆಗಾ ಲೋಕ ಅದಾಲತ್‌ ಡಿ. 19ರಂದು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:13 IST
Last Updated 23 ನವೆಂಬರ್ 2020, 16:13 IST
ಸಿ.ಎಂ. ಜೋಶಿ
ಸಿ.ಎಂ. ಜೋಶಿ   

ಬೆಳಗಾವಿ: ‘ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಶೀಘ್ರದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲೂ ಡಿ. 19ರಂದು ಮೆಗಾ ಲೋಕ ಅದಾಲತ್‌ ಆಯೋಜಿಸಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದರು.

‘ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ಅದಾಲತ್ ನಡೆಯಲಿದೆ. ರಾಜಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗುವುದು’ ಎಂದು ಪ್ರತಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

ನ್ಯಾಯಾಲಯ ಶುಲ್ಕವಿಲ್ಲ: ‘ಪಕ್ಷಗಾರರು ನೇರವಾಗಿ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಅಂತೆಯೇ ಸಿವಿಲ್ ಪ್ರಕರಣ ಇತ್ಯರ್ಥಗೊಂಡರೆ ಆವಾರ್ಡ್ ಮಾಡಲಾಗುವುದು. ಅದು ಸಾಮಾನ್ಯ ಡಿಕ್ರಿಯಷ್ಟೆ ಮಹತ್ವ ಪಡೆದಿರುತ್ತದೆ. ರಾಜಿಯಾದಲ್ಲಿ ನ್ಯಾಯಾಲಯ ಶುಲ್ಕವನ್ನು ಶೇ 100ರಷ್ಟು ಹಿಂದಿರುಗಿಸಲಾಗುವುದು ಹಾಗೂ ಲೋಕ ಅದಾಲತ್ ಅವಾರ್ಡ್‌ ವಿರುದ್ಧ ಮೇಲ್ಮನವಿಗೆ ಅವಕಾಶವಿಲ್ಲ’ ಎಂದು ಹೇಳಿದರು.

ADVERTISEMENT

‘ಭೂಸ್ವಾಧೀನ ಪ್ರಕರಣಗಳನ್ನೂ ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಂಧಾನಕಾರರಾಗಿ ಪಾಲ್ಗೊಳ್ಳುವಂತೆ ತಿಳಿಸಿದ್ದೇವೆ. ಐದು ವರ್ಷಗಳ ಅಂಕಿ–ಅಂಶ ಗಮನಿಸಿದರೆ ಎಲ್ಲ ನ್ಯಾಯಾಲಯಗಳಲ್ಲಿ ಸೇರಿ ಒಟ್ಟು ಶೇ 18ರಷ್ಟು ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗುತ್ತಿವೆ. ಈ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಿಸಬೇಕು ಎನ್ನುವ ಉದ್ದೇಶವಿದೆ’ ಎಂದು ತಿಳಿಸಿದರು.

‘ನ್ಯಾಯಾಲಯದ ಅವಧಿ ಮುಗಿದ ನಂತರ ನಿತ್ಯವೂ ಲೋಕ ಅದಾಲತ್ ನಡೆಸಲಾಗುತ್ತಿದೆ. ಇಬ್ಬರಿಂದ ಮೂವರು ನ್ಯಾಯಾಧೀಶರು ಇದಕ್ಕೆ ಸಮಯ ಕೊಡುತ್ತಿದ್ದಾರೆ. ನಿತ್ಯ ಸಂಜೆ 4ಕ್ಕೆ (ರಜಾ ದಿನಗಳನ್ನು ಹೊರತುಪಡಿಸಿ) ನಗರದ ನ್ಯಾಯಾಲಯದ ಎ.ಡಿ.ಆರ್. ಕಟ್ಟಡ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಬೈಠಕ್ ಏರ್ಪಡಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಬೆಳಗಾವಿಗೆ ಹೊಸದಾಗಿ 6 ನ್ಯಾಯಾಲಯಗಳು ಮಂಜೂರಾಗಿದ್ದು, ನಿರ್ಮಾಣಕ್ಕೆ ಜಾಗದ ಕೊರತೆ ಎದುರಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ್ ಇದ್ದರು.

ಹೆಚ್ಚಿನ ಮಾಹಿತಿಗೆ ದೂ:0831–2423216 ಸಂಪರ್ಕಿಸಬಹುದು.

***

ಯಾವ್ಯಾವ ಪ್ರಕರಣಗಳು?

‘ವ್ಯಾಜ್ಯ ಪೂರ್ವ ಪ್ರಕರಣಗಳು ಸಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳನ್ನು ವಿಂಗಡಿಸಲಾಗಿದೆ. ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳ ಪ್ರಕರಣಗಳು ಹಾಗೂ ಇತರೆ (ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, ವೈವಾಹಿಕ ಮತ್ತು ಇತರ ಸಿವಿಲ್ ವ್ಯಾಜ್ಯಗಳು) ಪ್ರಕರಣಗಳನ್ನು ರಾಜಿ– ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು’ ಎಂದು ಜೋಶಿ ತಿಳಿಸಿದರು.

‘ಜಿಲ್ಲೆಯಲ್ಲಿ 77 ನ್ಯಾಯಾಲಯಗಳಿದ್ದು, 72ರಲ್ಲಿ ನ್ಯಾಯಾಧೀಶರಿದ್ದಾರೆ. ಉಳಿದವುಗಳಿಗೆ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. 1.24 ಲಕ್ಷ ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 16ಸಾವಿರ ಪ್ರಕರಣಗಳು ರಾಜಿಗೆ ಯೋಗ್ಯವಾಗಿವೆ. ಕೋವಿಡ್–19ನಿಂದಾಗಿ ಅನೇಕ ಆರ್ಥಿಕ ಸವಾಲುಗಳು ಉಂಟಾಗಿವೆ. ಹೀಗಾಗಿ, ಈ ಸಂದರ್ಭದಲ್ಲಿ ರಾಜಿ–ಸಂಧಾನ ಪ್ರಕ್ರಿಯೆ ಹೆಚ್ಚು ಪ್ರಸ್ತುತವಾಗಿದೆ’ ಎಂದರು.

***

ಪ್ರಕರಣವೇ ಸರ್ವಸ್ವವಲ್ಲ. ಅದಕ್ಕೂ ಮೀರಿ ಜೀವನವಿದೆ ಎನ್ನುವುದನ್ನು ಕಕ್ಷಿದಾರರು ಅರಿಯಬೇಕು. ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಬೇಕು

-ಸಿ.ಎಂ. ಜೋಶಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.