ADVERTISEMENT

ಕಲುಷಿತ ನೀರು ಕುಡಿದು 2 ಸಾವು: ₹ 10 ಲಕ್ಷ ಪರಿಹಾರ ಘೋಷಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 10:06 IST
Last Updated 27 ಅಕ್ಟೋಬರ್ 2022, 10:06 IST

ರಾಮದುರ್ಗ (ಬೆಳಗಾವಿ ಜಿಲ್ಲೆ): ಕಲುಷಿತ ನೀರು ಕುಡಿದು ಜೀವ ಕಳೆದುಕೊಂಡ ತಾಲ್ಲೂಕಿನ ಮುದೇನೂರ ಗ್ರಾಮದ ಶಿವಪ್ಪ ಯಂಡಿಗೇರಿ (70) ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ₹ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಆದರೆ, ಸರಸ್ವತಿ ಅವರ ಬಗ್ಗೆ ಯಾವುದೇ ಮಾತು ಹೇಳಿಲ್ಲ.

ಮಾಧ್ಯಮಗಳಿಗೆ ವಿಡಿಯೊ ಹೇಳಿಕೆ ನೀಡಿದ ಕಾರಜೋಳ, ‘ಶಿವಪ್ಪ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿ ಅವರಿಂದ ಅನುಮತಿ ಪಡೆದಿದ್ದೇನೆ. ಗ್ರಾಮದಲ್ಲಿ ಅಸ್ವಸ್ಥಗೊಂಡ ಎಲ್ಲರಿಗೂ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕೊಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಈ ಗ್ರಾಮದಲ್ಲಿ ಆರ್‌.ಒ. ಘಟಕದ ಕೂಡ ಇದೆ. ಜನರು ಕುಡಿಯಲು ಇದರ ನೀರನ್ನೇ ಬಳಸಬೇಕು. ಬೋರ್‌ವೆಲ್‌, ಪೈಪ್‌ಲೈನ್‌ ಮೂಲಕ ಸರಬರಾಜು ಆಗುವ ನೀರನ್ನು ಬಳಸಬಾರದು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಮುದೇನೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಈಗಾಗಲೇ ಜಲಜೀವನ್‌ ಮಿಷನ್‌ ಅಡಿ ಕೆಲಸ ಆರಂಭಿಸಲಾಗಿದೆ. ಶೇ 80ರಷ್ಟು ಕೆಲಸ ಮುಗಿದೆ. ಇನ್ನೊಂದು ತಿಂಗಳಲ್ಲಿ ಶುದ್ಧ ನೀರು ಸರಬರಾಜು ಆರಂಭವಾಗಲಿದೆ’ ಎಂದೂ ಅವರು ಭರವಸೆ ನೀಡಿದ್ದಾರೆ.

ವೃದ್ಧೆ ಕುಟುಂಬ ಕಡೆಗಣಿಸಬೇಡಿ

‘ಸರಸ್ವತಿ ನಿಂಗಪ್ಪ ಹಾವಳ್ಳಿ (70) ಅವರು ಕೂಡ ಬುಧವಾರ ರಾತ್ರಿ ವಾಂತಿ– ಭೇದಿ ಕಾರಣ ಮೃತಪಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನೂ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ಸಚಿವರು ಶಿವಪ್ಪ ಅವರಿಗೆ ನೀಡಿದ ಪರಿಹಾರವನ್ನೇ ಸರಸ್ವತಿ ಅವರ ಕುಟುಂಬಕ್ಕೂ ನೀಡಬೇಕು’ ಎಂದು ಗ್ರಾಮದ ಮುಖಂಡರು ವಿಡಿಯೊ ಹರಿಬಿಟ್ಟು ಆಗ್ರಹಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.