ADVERTISEMENT

‘ಬ್ರಿಜ್ ಕಂ ಬಾಂದಾರ್’ ಜೂನ್‌ಗೆ ಸಿದ್ಧ

ಸುಲ್ತಾನಪುರದಲ್ಲಿ ಶಾಸಕ ಉಮೇಶ್ ಕತ್ತಿ ಅವರಿಂದ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 10:47 IST
Last Updated 4 ಜನವರಿ 2018, 10:47 IST
ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರ ಬಳಿ ನಿರ್ಮಾಣವಾಗುತ್ತಿರುವ ’ಬ್ರಿಜ್ ಕಂ ಬಾಂದಾರ್’ ಕಾಮಗಾರಿಯನ್ನು ಶಾಸಕ ಉಮೇಶ ಕತ್ತಿ ವೀಕ್ಷಿಸಿದರು
ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರ ಬಳಿ ನಿರ್ಮಾಣವಾಗುತ್ತಿರುವ ’ಬ್ರಿಜ್ ಕಂ ಬಾಂದಾರ್’ ಕಾಮಗಾರಿಯನ್ನು ಶಾಸಕ ಉಮೇಶ ಕತ್ತಿ ವೀಕ್ಷಿಸಿದರು   

ಹುಕ್ಕೇರಿ: ತಾಲ್ಲೂಕಿನ ಸುಲ್ತಾನಪುರ ಬಳಿ ನಿರ್ಮಾಣವಾಗುತ್ತಿರುವ ‘ಬ್ರಿಜ್ ಕಂ ಬಾಂದಾರ್’ ಕಾಮಗಾರಿ ಬರುವ ಜೂನ್ ಒಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಉಮೇಶ್ ಕತ್ತಿ ಹೇಳಿದರು.

ಅವರು ಇತ್ತೀಚೆಗೆ ಈ ’ಬ್ರಿಜ್ ಕಂ ಬಾಂಧಾರ್’ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

‘₹20 ಕೋಟಿ ವೆಚ್ಚದಲ್ಲಿ ನಡೆದಿರುವ ಕಾಮಗಾರಿಯ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶಾಸಕರು ಕಾಮಗಾರಿಯು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಈ ಕಾಮಗಾರಿಯಿಂದ ತಾಲ್ಲೂಕಿನ ಕೋಚರಿ ಗ್ರಾಮದವರೆಗೆ ಹಿನ್ನೀರು ನಿಲ್ಲುವುದು. ಇದರಿಂದ ಸುಮಾರು 15 ಗ್ರಾಮಗಳ ಜನ ಮತ್ತು ದನಕರುಗಳ ಕುಡಿಯುವ ನೀರಿನ ಮತ್ತು ಕೃಷಿಗೆ ನೀರಾವರಿ ಸಮಸ್ಯೆ ನೀಗಲಿದೆ’ ಎಂದರು.

ADVERTISEMENT

‘ಹಿನ್ನೀರು ಸುಮಾರು 10 ತಿಂಗಳು ಜನರಿಗೆ ಲಭ್ಯವಾಗಲಿದೆ. ಹಿನ್ನೀರಿನಿಂದ ಈ ಭಾಗದ ತೆರೆದ ಬಾವಿ, ಕೊಳವೆ ಬಾವಿಗೆ ಅಂತರ್ಜಲ ಹೆಚ್ಚುವ ಮೂಲಕ ಬೇಸಿಗೆಯಲ್ಲೂ ಜನರಿಗೆ ಅನುಕೂಲ ಆಗಲಿದೆ’ ಎಂದರು.

‘ಹಿರಣ್ಯಕೇಶಿ ನದಿಯಲ್ಲಿ ಜೂನ್ ಮತ್ತು ಜುಲೈನಲ್ಲಿ ಹರಿಯುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸುಲ್ತಾ ನಪುರ ಬಳಿ ₹74 ಕೋಟಿ ವೆಚ್ಚದ ನೀರೆತ್ತುವ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಚಿಕ್ಕೋಡಿ ಬ್ರ್ಯಾಂಚ್ ಕೆನಾಲ್ (ಸಿಬಿಸಿ)ಗೆ ನೀರೆತ್ತಲು ಕ್ರಮ ಜರುಗಿಸಲಾಗುವುದು. ಸಂಕೇಶ್ವರ ಅಥವಾ ಕೋಚರಿ ಬಳಿ ಏತ ನೀರಾವರಿ ಘಟಕ ಸ್ಥಾಪಿಸಿ ಅಮ್ಮಣಗಿ ಮತ್ತು ಹಂದಿ ಗುಂದ ಕೆರೆಗಳಿಗೆ ನೀರು ಪೂರೈಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಹುಕ್ಕೇರಿ ಪಟ್ಟಣದ ಅಕ್ಕಪಕ್ಕದ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶಂಕರಲಿಂಗ ಮತ್ತು ಅಡವಿಸಿದ್ಧೇಶ್ವರ ಏತ ನೀರಾವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ತಿಳಿಸಿದ ಅವರು, ಈ ಪ್ರಸ್ತಾವಣೆಗೆ ಮಂಜೂರಾತಿ ದೊರೆತಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ತಟವಾಟ ಯೋಜನೆ: ನೀರಾವರಿಗೆ ಸಂಬಂಧಿತ ತಟವಾಟ ಯೋಜನೆಗೆ ರಾಜ್ಯ ಸರ್ಕಾರ ಶೇ 50 ರಷ್ಟು ಹಣಕಾಸಿನ ಸಹಾಯ ಮಾಡಬೇಕು. ಆದರೆ ಈಗಿನ ಸರ್ಕಾರ ಮಾಡುತ್ತಿಲ್ಲ. ಮುಂದೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಟವಾಟ ಯೋಜನೆಗೆ ಚಾಲನೆ ನೀಡಿ ತಮ್ಮ ಮತಕ್ಷೇತ್ರದಲ್ಲಿ ನೂರಕ್ಕೆ 90ರಷ್ಟು ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಎಪಿಎಂಸಿ ನಿರ್ದೇಶಕ ಮಹಾನಿಂಗ ಸನದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.