ADVERTISEMENT

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 10:54 IST
Last Updated 4 ಜನವರಿ 2018, 10:54 IST

ಸಂಕೇಶ್ವರ: ಇಲ್ಲಿನ ಹಳೆಯ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದ್ವಿಪಥದ ಸುಧಾರಣೆ ಹಾಗೂ ಸಿಮೆಂಟ್‌ ರಸ್ತೆ ಕಾಮಗಾರಿಗಳಿಗೆ ಶಾಸಕ ಉಮೇಶ ಕತ್ತಿ ಬುಧವಾರ ಚಾಲನೆ ನೀಡಿದರು.

‘ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ಸಂಕೇಶ್ವರ ಹಳೆಯ ರಾಷ್ಟ್ರೀಯ ಹೆದ್ದಾರಿಯ ಸುಧಾರಣೆ ಅಗತ್ಯವಾಗಿತ್ತು. ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಅಂಚೆ ಕಚೇರಿವರೆಗೆ ಸಿಮೆಂಟ್‌ ರಸ್ತೆ ಹಾಗೂ ಅಂಚೆ ಕಚೇರಿಯಿಂದ ಸೋಲಾಪುರ ಗೇಟ್‌ವರೆಗೆ ಡಾಂಬರು ರಸ್ತೆಗಳು ನಿರ್ಮಾಣವಾಗಲಿವೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಮತ್ತು ಒಳನಾಡು ಸಾರಿಗೆ ಇಲಾಖೆಯು ₹7.40 ಕೋಟಿ ಮಂಜೂರು ಮಾಡಿದೆ’ ಎಂದು ತಿಳಿಸಿದರು.

ನಂತರ ಪುರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಶಾಸಕ ಉಮೇಶ ಕತ್ತಿ ನಗರ ನೀರು ಸರಬರಾಜು ಮಂಡಳಿಯ ಎಂಜಿನಿಯರ್‌  ಅಶೋಕ ದೊಡ್ಡಲಿಂಗನ್ನರ, ‘ಸಂಕೇಶ್ವರ ಪಟ್ಟಣದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗಾಗಿ ಪೈಪ್‌ಲೈನ್‌ಗಳನ್ನು ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಪ್ರಾಯೋಗಿಕವಾಗಿ ಒಂದು ವಿಭಾಗದಲ್ಲಿ ನೀರು ಪೂರೈಸಿ, ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ವಿ.ಎನ್. ಪಾಟೀಲ, ‘ಬಿಎಸ್‌ಎನ್‌ಎಲ್‌ನವರು ಇಲಾಖೆಯ ಪೂರ್ವಾನುಮತಿ ಇಲ್ಲದೆ ರಸ್ತೆಗಳನ್ನು ಅಗೆಯಬಾರದು. ಅನಿವಾರ್ಯವಾದರೆ ತಮ್ಮ ಇಲಾಖಾ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ರಸ್ತೆಗಳನ್ನು ಅಗೆಯಬೇಕು’ ಎಂದು ಕೋರಿದರು.

ಪುರಸಭೆಯಿಂದ ಕೈಗೊಂಡಿರುವ ಕಾಮಗಾರಿಗಳು ಕುಂಟುತ್ತಿರುವುದಕ್ಕೆ ಸದಸ್ಯರಾದ ಗಜಾನನ ಕ್ವಳ್ಳಿ ಹಾಗೂ ಸಂಜಯ ನಷ್ಠಿ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ಧನಶ್ರೀ ಕೋಳೆಕರ, ಉಪಾಧ್ಯಕ್ಷ ಅಪ್ಪಾಸಾಹೇಬ ಹೆದ್ದೂರಶೆಟ್ಟಿ ಹಾಗೂ ಸದಸ್ಯರು ಇದ್ದರು.

***
ಪುರಸಭೆಯಿಂದ ಅಧಿಕೃತವಾಗಿ ನಳ ಸಂಪರ್ಕ ಪಡೆದವರಿಗೆ ಮೊದಲು ನೀರು ನೀಡಬೇಕು. ಅನಧಿಕೃತ ಸಂಪರ್ಕ ಪಡೆದಿರುವವರಿಗೆ ಅಧಿಕೃತವಾದ ಬಳಿಕ ನೀರು ಕೊಡಿ
       –ಉಮೇಶ ಕತ್ತಿ,
          ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.