ADVERTISEMENT

‘ಕತ್ತಿ’ ನಡೆಯ ಬಗ್ಗೆ ತೀವ್ರ ಕುತೂಹಲ!

ಎಂ.ಮಹೇಶ
Published 12 ಫೆಬ್ರುವರಿ 2018, 9:47 IST
Last Updated 12 ಫೆಬ್ರುವರಿ 2018, 9:47 IST
ಉಮೇಶ  ಕತ್ತಿ
ಉಮೇಶ ಕತ್ತಿ   

ಬೆಳಗಾವಿ: ಹಾಲಿ ಶಾಸಕ ಬಿಜೆಪಿಯ ಉಮೇಶ ಕತ್ತಿ ಕೈಗೊಳ್ಳುವ ನಿರ್ಧಾರದ ಮೇಲೆ, ಹುಕ್ಕೇರಿ ಕ್ಷೇತ್ರದ ಚಿತ್ರಣ ಸ್ಪಷ್ಟವಾಗಲಿದೆ! ಅವರನ್ನು ಸೆಳೆಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಗಾಳ ಹಾಕಿರುವುದು ಇದಕ್ಕೆ ಕಾರಣ.

ಕತ್ತಿ ಬಿಜೆಪಿ ತೊರೆದಲ್ಲಿ ನಾನೂ ಅಭ್ಯರ್ಥಿ ಆಗುವ ಬಯಕೆ ಹೊಂದಿದ್ದೇನೆ ಎಂದು ಆ ಪಕ್ಷದ ಹಲವು ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಬಿಜೆಪಿ
ಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.

ಉಮೇಶ ಕತ್ತಿ ಸಹೋದರ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ರಮೇಶ ಕತ್ತಿ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಸಚಿವ ಶಶಿಕಾಂತ ನಾಯ್ಕ, ವೈದ್ಯ ಡಾ.ರಾಜೇಶ ನೇರ್ಲಿ, ಮುಖಂಡ ಪರಗೌಡ ಪಾಟೀಲ ಕಮಲ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕತ್ತಿ ಬಿಜೆಪಿಯಲ್ಲಿಯೇ ಮುಂದುವರಿದರೆ, ಆಕಾಂಕ್ಷಿಗಳು ಸುಮ್ಮನಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

‘ನಾನೂ ಪ್ರಬಲ ಆಕಾಂಕ್ಷಿ. ಹಾಲಿ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ವದಂತಿ ಇದೆ. ಒಂದು ವೇಳೆ ಅವರು ಹೋದರೆ ಅವಕಾಶ ಪಡೆಯಲು ಯತ್ನಿಸು
ತ್ತೇನೆ’ ಎಂದು ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಪತ್ರಿಕಾ ಗೋಷ್ಠಿಯಲ್ಲಿಯೇ ತಿಳಿಸಿದ್ದಾರೆ.

ಮತ್ತೆ ಕಣಕ್ಕೆ ಪಾಟೀಲ: ಕತ್ತಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ನ ಮಾಜಿ ಸಚಿವ ಎ.ಬಿ. ಪಾಟೀಲ ಹತ್ತು ವರ್ಷಗಳ ನಂತರ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹುಕ್ಕೇರಿ–ಸಂಕೇಶ್ವರ ಕ್ಷೇತ್ರ ವಿಭಜನೆ ನಂತರ ಪ್ರತ್ಯೇಕವಾಗಿರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಉಮೇಶ ಕತ್ತಿ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ಪಕ್ಷ ಬದಲಾಯಿಸಿದರೂ ಸೋಲಿನ ರುಚಿ ಕಂಡವರಲ್ಲ.

ಅವರ ವಿರುದ್ಧ ಸೋಲು ಕಂಡಿದ್ದ ಎ.ಬಿ.ಪಾಟೀಲ ಅವರು, 2013ರ ಚುನಾವಣೆಯಿಂದ ದೂರ ಉಳಿದಿದ್ದರು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರವಿ ಕರಾಳೆ
ಠೇವಣಿ ಉಳಿಸಿಕೊಳ್ಳುವುದಕ್ಕೂ ಪರದಾಡಿದ್ದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾಜಿ ಸಚಿವರೂ ಆಗಿರುವ ಎ.ಬಿ.ಪಾಟೀಲ ಆಕಾಂಕ್ಷಿ ಆಗಿದ್ದಾರೆ. ಇದಕ್ಕಾಗಿ ಇದೀಗ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.

1985ರಲ್ಲಿ ಹಿರಿಯ ಸಹಕಾರ ಧುರೀಣರಾಗಿದ್ದ ತಂದೆ ವಿಶ್ವನಾಥ ಮಲ್ಲಪ್ಪ ಕತ್ತಿ ಅವರ ಅಕಾಲಿಕ ನಿಧನದ ನಂತರ ತೆರವಾದ ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದಿಂದ ಚುನಾಯಿತರಾಗುವ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದವರು ಉಮೇಶ ಕತ್ತಿ. ದಿ.ಜೆ.ಎಚ್. ಪಟೇಲರ ಮಂತ್ರಿಮಂಡಲದಲ್ಲಿ ಸಕ್ಕರೆ ಸಚಿವರಾಗಿದ್ದರು.

ರಾಜೀನಾಮೆ ನೀಡಿ ಸ್ಪರ್ಧೆ: 2008ರಲ್ಲಿ 13ನೇ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪುನರ್‌ವಿಂಗಡಣೆ ಆದ ಹುಕ್ಕೇರಿ ಮತಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಐದನೇ ಬಾರಿ ಶಾಸಕರಾಗಿ ಪುನ ರಾಯ್ಕೆಯಾದರು. ಎರಡು ತಿಂಗಳಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಂತರ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿಸಿ ಬಿಜೆಪಿ ಸೇರಿದರು. ನಂತರ ನಡೆದ ಉಪಚುನಾವಣೆಯಲ್ಲೂ ಗೆದ್ದು, ತೋಟಗಾರಿಕೆ ಸಚಿವರಾದರು. 2013ರ ಚುನಾವಣೆಯಲ್ಲಿ ಗೆದ್ದು 7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 8ನೇ ಬಾರಿಗೂ ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ.

ತಮ್ಮ ಸಾರಥ್ಯದ ಹೀರಾ ಶುಗರ್ಸ್‌ ಹಾಗೂ ವಿಶ್ವನಾಥ ಶುಗರ್ಸ್‌ ಕಾರ್ಖಾನೆಯಲ್ಲಿ ಟನ್‌ ಕಬ್ಬಿಗೆ ₹ 3000 ಬೆಲೆ ಘೋಷಣೆ ಮಾಡಿ, ಕಬ್ಬು ಬೆಳೆಗಾರರ ಪ್ರೀತಿ ಗಳಿಸಲು ಯತ್ನಿಸಿದ್ದಾರೆ.

ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವಂತಹ ಸ್ಥಿತಿ ಇದೆ. ಹಿಂದಿನ ಚುನಾವಣೆಗಳ ಫಲಿತಾಂಶ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಉಮೇಶ ಕತ್ತಿ
ಯಾವುದೇ ಪಕ್ಷದಲ್ಲಿದ್ದರೂ ಗೆಲುವು ಸಾಧಿಸಿದ್ದಾರೆ. ಇದರಿಂದ ಕತ್ತಿ ಕುಟಂಬದ ಹಿಡಿತದಲ್ಲಿ ಕ್ಷೇತ್ರವಿದೆ. ಇದನ್ನು ಬಿಡಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ತಂತ್ರ ರೂಪಿಸುತ್ತಿವೆ. ಕತ್ತಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮಾತುಕತೆ ನಡೆಸಿವೆ.

‘ಕಾಂಗ್ರೆಸ್‌ಗೆ ಬರುವಂತೆ ಸ್ವತಃ ಮುಖ್ಯಮಂತ್ರಿಯೇ ಕತ್ತಿ ಜತೆ ಮಾತುಕತೆ ನಡೆಸಿದ್ದರು. ಅವರು ಸಮಯ ತೆಗೆದುಕೊಂಡಿದ್ದಾರೆ’ ಎಂದು ಈ ಭಾಗದ ಪ್ರಭಾವಿ ಮುಖಂಡ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಬಹಿರಂಗವಾಗಿ ತಿಳಿಸಿದ್ದಾರೆ. ಇನ್ನೊಂದೆಡೆ, ಜೆಡಿಎಸ್  ವರಿಷ್ಠರೂ ಕತ್ತಿ ಜತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಕತ್ತಿ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.

ಜೆಡಿಎಸ್‌ನಿಂದ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜ ಪಾಟೀಲ ಹಾಗೂ ಮಾಜಿ ಶಾಸಕ, ಸಹಕಾರ ಧುರೀಣ ಅಪ್ಪಣಗೌಡ ಪಾಟೀಲ ಪುತ್ರ
ಎಂ.ಬಿ. ಪಾಟೀಲ ಅವರ ಹೆಸರುಗಳೂ ಚರ್ಚೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.