ADVERTISEMENT

ಚಕ್ಕಡಿಯಲ್ಲಿ ತೆರಳಿ ಮತ ಕೇಳುತ್ತಿದ್ದೆವು!

ಎಂ.ಮಹೇಶ
Published 21 ಫೆಬ್ರುವರಿ 2018, 9:37 IST
Last Updated 21 ಫೆಬ್ರುವರಿ 2018, 9:37 IST
ಶಾರದಮ್ಮ
ಶಾರದಮ್ಮ   

ಬೆಳಗಾವಿ: ‘ಯಾರು ಚೆನ್ನಾಗಿ ಕೆಲಸ ಮಾಡಬಲ್ಲರು, ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಬಲ್ಲರು ಎನ್ನುವುದನ್ನು ಜನರು ನೋಡುತ್ತಿದ್ದರು. ಮತ ಹಾಕುವುದು ಆಗ ನಿಜವಾಗಿಯೂ ದಾನವೇ ಆಗಿತ್ತು. ಇದಕ್ಕಾಗಿ ಮತದಾರರು ವೈಯಕ್ತಿಕವಾಗಿ ಯಾವುದೇ ಬೇಡಿಕೆಗಳನ್ನು ಇಡುತ್ತಿರಲಿಲ್ಲ’ ಮಾಜಿ ಶಾಸಕಿ, 92 ವರ್ಷದ ಶಾರದಮ್ಮ ಪಟ್ಟಣ ಅವರು ನೆನಪಿಸಿಕೊಂಡಿದ್ದು ಹೀಗೆ.

ಜಿಲ್ಲೆಯ ರಾಮದುರ್ಗ ಕ್ಷೇತ್ರದಿಂದ 1967ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಜಿಲ್ಲೆಯ ಕೆಲವೇ ಶಾಸಕಿಯರ ಪೈಕಿ ಇವರೂ ಒಬ್ಬರು.

‘ಅಂದಿನ ಚುನಾವಣೆಗೂ, ಇಂದಿನ ಚುನಾವಣೆಗೂ ಬಹಳಷ್ಟು ವ್ಯತ್ಯಾಸಗಳಾಗಿವೆ. ಆಗ, ಹೆಚ್ಚಿನ ಅಬ್ಬರ ಹಾಗೂ ಗಲಾಟೆಗಳಿಲ್ಲದೆ ಚುನಾವಣೆಗಳು ಶಾಂತಿಯುತವಾಗಿ ನಡೆಯುತ್ತಿದ್ದವು. ಜನರಿಗೆ ಆಸೆ– ಆಮಿಷ ಒಡ್ಡಬೇಕಾದ ಅನಿವಾರ್ಯವೂ ಇರುತ್ತಿರಲಿಲ್ಲ. ಆದರೆ, ಇಂದಿನ ಅಬ್ಬರವೇ ಬೇರೆ. ಆಗುವ ವೆಚ್ಚದ ಬಗ್ಗೆ ಮಾತನಾಡುವಂತೆಯೇ ಇಲ್ಲ ಎನ್ನುವಂತಾಗಿದೆ. ನಾವು ಶಾಸಕರಾಗಿದ್ದಾಗಿನ ದಿನಗಳು ಚೆನ್ನಾಗಿದ್ದವು’ ಎಂದು ಹೇಳಿದರು.

ADVERTISEMENT

15ಸಾವಿರ ಮತಗಳಿಂದ: ‘ನಾನು ಮೊದಲು ಶಾಸಕಿಯಾದಾಗ 15ಸಾವಿರ ಮತಗಳ ಭಾರಿ ಅಂತರದಿಂದ ಜನರು ನನ್ನನ್ನು ಗೆಲ್ಲಿಸಿದ್ದರು. ಮತದಾರರಿಗೆ ಹಣ ಕೊಡುವ ರೂಢಿಯೇ ಇರಲಿಲ್ಲ. ಪತಿ ಮಹಾದೇವಪ್ಪ ಪಟ್ಟಣ ನನ್ನ ಬೆನ್ನೆಲುಬಾಗಿದ್ದರು. ಬಹಳಷ್ಟು ಚಟುವಟಿಕೆಗಳನ್ನು ಅವರೇ ನಿರ್ವಹಿಸುತ್ತಿದ್ದರು. ಇದರಿಂದಾಗಿ ನನಗೆ ಹೆಚ್ಚಿನ ಹೊರೆ ಇರುತ್ತಿರಲಿಲ್ಲ. ಜನ ಕೂಡ ಹಣ ಕೇಳುತ್ತಿರಲಿಲ್ಲ. ಉತ್ಸಾಹದಿಂದ ಮತ ಹಾಕುತ್ತಿದ್ದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬರುತ್ತಿದ್ದರು’ ಎಂದು ತಿಳಿಸಿದರು.

‘ಆಗಿನಿಂದ ಈಗಿನವರೆಗೂ ಕಾಂಗ್ರೆಸ್‌ನಲ್ಲಿಯೇ ಇದ್ದೇವೆ. ಮೊದಮೊದಲು ಚುನಾವಣೆ ಎಂದರೆ ಭಯವಾಗುತ್ತಿತ್ತು. ಆದರೆ, ಪತಿ ಧೈರ್ಯ ತುಂಬುತ್ತಿದ್ದರು. ಬೆಂಬಲಿಗರು ಜತೆಗಿರುತ್ತಿದ್ದರು. ಹಳ್ಳಿ ಹಳ್ಳಿಗಳಿಗೆ ತೆರಳಿ ಬೆಳಿಗ್ಗೆಯಿಂದ ಸಂಜೆವರೆಗೂ ಪ್ರಚಾರ ಮಾಡುತ್ತಿದ್ದೆವು. ಅಲ್ಲಲ್ಲಿ, ಸಭೆ ನಡೆಸುತ್ತಿದ್ದೆವು. ಪ್ರತಿ ಮನೆಗೂ ಹೋಗಿ ಪ್ರಚಾರ ಮಾಡುವ ಅಗತ್ಯ ಇರುತ್ತಿರಲಿಲ್ಲ. ಊರಿನ ಪ್ರಮುಖ ಸ್ಥಳದಲ್ಲಿ ಎಲ್ಲರನ್ನೂ ಸೇರಿಸಿ ಮಾತನಾಡುತ್ತಿದ್ದೆವು. ಮತ ಹಾಕು
ವಂತೆ ಕೇಳಿಕೊಳ್ಳುತ್ತಿದ್ದೆವು. ನಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಿದ್ದೆವು. ಮತದಾನದ ಹಿಂದಿನ ದಿನ ಜಾಸ್ತಿ ಓಡಾಡುತ್ತಿದ್ದೆವು’ ಎಂದು ನೆನೆದರು.

‘ಆಗೆಲ್ಲಾ ಇಷ್ಟೊಂದು ಅನುಕೂಲವಿರಲಿಲ್ಲ. ಕೆಲವೊಮ್ಮೆ ಚಕ್ಕಡಿಯಲ್ಲೂ ತೆರಳಿ ಪ್ರಚಾರ ಮಾಡಿದ್ದೆವು. ಟ್ರ್ಯಾಕ್ಸ್‌ಗಳಲ್ಲಿ ಹೋಗುತ್ತಿದ್ದೆವು. ವೀರೇಂದ್ರ ಪಾಟೀಲರೂ ಬಂದು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಾದ ಅಶೋಕ ಪಟ್ಟಣ, ಪ್ರದೀಪ ಚಿಕ್ಕವರಾಗಿದ್ದರು. ಬೆಂಗಳೂರಿನಲ್ಲಿ ಓದುತ್ತಿದ್ದರು’ ಎಂದರು.

ಅಭಿವೃದ್ಧಿಗೆ ಕ್ರಮ: ‘ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಮಾಡಿಸಿದ್ದೆ. ಹಿರೇಕೊಪ್ಪ, ಆನೆಗೊಂದಿ ಕೆರೆ ಸೇರಿದಂತೆ ಹಲವು ಕೆರೆಗಳನ್ನು ಕಟ್ಟಿಸಿದ್ದೆ. ಅಂದು ಶಾಲೆಗಳನ್ನು ಕಟ್ಟಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೆ. ಹಲವು ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದೆ. ಶಿವಕಾಟಿ, ಸುರೇಬಾನ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೆ’ ಎಂದು ಹಂಚಿಕೊಂಡರು.

‘ಅಂದಿನ ಚುನಾವಣೆಗಳಲ್ಲಿ ಮತಗಟ್ಟೆಗಳ ಸಂಖ್ಯೆ ಕಡಿಮೆ ಇರುತ್ತಿದ್ದವು. ದೂರದ ಊರುಗಳಲ್ಲಿ ಇರುತ್ತಿದ್ದ ಕೆಲವರನ್ನು ಕರೆದುಕೊಂಡು ಬಂದು ಮತ ಹಾಕಿಸುತ್ತಿದ್ದ ಉದಾಹರಣೆಗಳಿವೆ. ಜನರಿಗೆ ಊಟ ಹಾಕಿಸುವ ವ್ಯವಸ್ಥೆಯೇನೂ ಇರಲಿಲ್ಲ. ಚುರುಮುರಿ, ಚಹಾ ಕೊಟ್ಟರೆ ಅದೇ ದೊಡ್ಡದು. ಮೂರ್ನಾಲ್ಕು ಮೂಟೆ ಚುರುಮುರಿ ಇಟ್ಟುಕೊಂಡು ಬೆಂಬಲಿಗರು ಮತಗಟ್ಟೆ ಸಮೀಪದಲ್ಲಿ ನಿಲ್ಲುತ್ತಿದ್ದರು. ಎಲ್ಲರೂ ಪ್ರೀತಿಯಿಂದಲೇ ಮತ ಹಾಕುತ್ತಿದ್ದರು’ ಎಂದು ಹೇಳಿದರು.

* * 

ಆಗಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಹೆಚ್ಚಿನ ಹಣ ಬೇಕಾಗುತ್ತಿರಲಿಲ್ಲ. ಈಗ, ಚಿತ್ರಣ ಸಂಪೂರ್ಣ ಬದಲಾಗಿದೆ
ಶಾರದಮ್ಮ ಪಟ್ಟಣ ಮಾಜಿ ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.