ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ ಆರೋಪ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 11:31 IST
Last Updated 21 ಜೂನ್ 2019, 11:31 IST
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ಸೆಮಿಸ್ಟರ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ತಾಲ್ಲೂಕು ಘಟಕದ ಸಂಚಾಲಕ ರೋಹಿತ ಉಮನಾಬಾದಿಮಠ ಮಾತನಾಡಿ, ‘ಕೆಲವು ದಿನಗಳಿಂದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ವಿವಿಧ ಸೆಮಿಸ್ಟರ್‌ ಪರೀಕ್ಷೆಗಳು ನಡೆಯುತ್ತಿದ್ದು, ಪ್ರತಿಯೊಂದು ವಿಷಯದ ಪ್ರಶ್ನೆಪತ್ರಿಕೆಯು ಸೋರಿಕೆಯಾಗುತ್ತಿವೆ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸುವುದು ಕೂಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಗೊತ್ತಿಲ್ಲ.ಇದು ನಾಚಿಕೆಗೇಡಿನ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ಪ್ರಶ್ನೆಪತ್ರಿಕೆ ₹ 10 ಸಾವಿರಕ್ಕೆ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ವಿವಿಯಲ್ಲಿ ಸ್ಟ್ರಾಂಗ್‌ ರೂಂ ಇತ್ಯಾದಿ ವ್ಯವಸ್ಥೆಗಳಿದ್ದರೂ ಕೂಡ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಹೇಗೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ಈ ಹಗರಣದಲ್ಲಿ ಭಾಗವಹಿಸಿರುವ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆಯಾಗುವುದರ ಜೊತೆಗೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ಬಗ್ಗೆ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆ:

ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಶಿವಾನಂದ ಕಾಂಬಳೆ, ಸಾಯಿನಾಥ ಕೋಲಕಾರ, ಚಿದಾನಂದ ಯಾವಗಲ್ಲ, ಶಾಶ್ವತ ಪಾಟೀಲ, ಕಿರಣ ದುಕಾಂದಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.