ADVERTISEMENT

ಹಂತ ಹಂತವಾಗಿ ಸ್ಥಳಾಂತರಕ್ಕೆ ಕ್ರಮ: ಆಯುಕ್ತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 6:36 IST
Last Updated 7 ನವೆಂಬರ್ 2021, 6:36 IST

ಬೆಳಗಾವಿ: ‘ಬೆಂಗಳೂರಿನಲ್ಲಿರುವ ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರ ಕಾರ್ಯಾಲಯವನ್ನು ಬೆಳಗಾವಿಗೆ ಸಂಪೂರ್ಣವಾಗಿ ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ’ ಎಂದು ಆಯುಕ್ತ ಶಿವಾನಂದ ಎಚ್. ಹಾಲಕೇರಿ ತಿಳಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ಅವರು, ‘ಈ ಕಾರ್ಯಾಲಯವು 1973ರಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ರೀತಿಯ ರಾಜ್ಯ ಮಟ್ಟದ ದೊಡ್ಡ ಕಚೇರಿಯನ್ನು ತಕ್ಷಣ ಸ್ಥಳಾಂತರಿಸಲು ಹಲವು ಅಡೆತಡೆಗಳಿರುತ್ತವೆ. ನಿತ್ಯವೂ ನಡೆಯುವ ಕಚೇರಿಯ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾ ಹಂತ ಹಂತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ’ ಹೇಳಿದ್ದಾರೆ.

‘ತಾತ್ಕಾಲಿಕವಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಕಚೇರಿ ಆರಂಭಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸುವರ್ಣ ವಿಧಾನಸೌಧದ ಎಇ ಜೊತೆ ಚರ್ಚಿಸಲಾಗಿದೆ. ಸ್ಥಳ ಗುರುತಿಸಲಾಗಿದೆ. ತಾತ್ಕಾಲಿಕ ಕಚೇರಿಯಲ್ಲಿ ಶಾಶ್ವತವಾಗಿ ಸಿಬ್ಬಂದಿಯನ್ನು ನಿಯೋಜಿಸಿಲ್ಲ; ವಾರದಲ್ಲಿ ಒಂದೆರಡು ದಿನ ಒಂದಿಬ್ಬರನ್ನು ನಿಯೋಜಿಸಲಾಗುತ್ತಿದೆ. ನಾನೂ ಕೆಲವು ದಿನಗಳು ಪ್ರವಾಸ ಕೈಗೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಅಧ್ಯಕ್ಷತೆಯಲ್ಲಿ ಒಮ್ಮೆ ಸೇರಿದಂತೆ ಎರಡು ಬಾರಿ ರೈತ ಮುಖಂಡರ ಸಭೆ ನಡೆಸಿದ್ದೇನೆ. 65 ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯನ್ನೂ ನಡೆಸಲಾಗಿದೆ. 65ರಲ್ಲಿ 44 ಸಕ್ಕರೆ ಕಾರ್ಖಾನೆಗಳು ಉತ್ತರ ಕರ್ನಾಟಕದಲ್ಲೇ ಇವೆ. ಹೀಗಾಗಿ, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಕುಂದುಕೊರತೆ ಆಲಿಸಲು ವಿಜಯಪುರ, ಬಾಗಲಕೋಟೆ ಹಾಗೂ ಹಾವೇರಿಯ ಮೂರು ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ರೈತ ಮುಖಂಡರ ಸಭೆ ಮಾಡಿದ್ದೇನೆ. ಪ್ರಗತಿಪರ ಕಬ್ಬು ಬೆಳೆಗಾರರ ಜಮೀನುಗಳಿಗೆ ಭೇಟಿ ನೀಡಿ ಅವರ ಕುಂದುಕೊರತೆ ಆಲಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಬೆಂಗಳೂರಿನ ಕಚೇರಿಯಲ್ಲಿ 1.36 ಲಕ್ಷ ಫೈಲ್‌ಗಳ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ. ಅದು ಮುಗಿದ ತಕ್ಷಣ ಕಚೇರಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳಗಾವಿಗೆ ಸ್ಥಳಾಂತರಿಸಲಾಗುವುದು. ಅಷ್ಟೊಂದು ಫೈಲ್‌ಗಳ ಪೂರ್ಣ ದಾಸ್ತಾನಿಗೆ ಸುಮಾರು ಮೂರು ತಿಂಗಳು ಕಾಲಾವಕಾಶ ಬೇಕಾಗಬಹುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.