ADVERTISEMENT

ಪರೀಕ್ಷೆ, ಫಲಿತಾಂಶ ಪದ್ಧತಿ ಬದಲಾಗಲಿ: ಶಿಕ್ಷಣ ಇಲಾಖೆಗೆ ಆದಮಅಲಿ ಪೀರಜಾದೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:41 IST
Last Updated 20 ಜೂನ್ 2025, 13:41 IST
ಆದಮಅಲಿ ಪೀರಜಾದೆ
ಆದಮಅಲಿ ಪೀರಜಾದೆ   

ನಿಪ್ಪಾಣಿ: ‘ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳಲ್ಲಿಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವುದು ಹಾಗೂ ಅನುದಾನಿತ ಶಾಲೆಗಳಿಗೆ ವೇತನ ಅನುದಾನ ತಡೆಹಿಡಿಯುವುದರ ಕುರಿತು ಆದೇಶಿಸಿದ ಸರ್ಕಾರದ ನಡೆ ಸಮಂಜಸವಲ್ಲ’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಆದಮಅಲಿ ಪೀರಜಾದೆ ಶಾಲಾ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

‘ರಾಜ್ಯದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಫಲಿತಾಂಶ ಶೇ 62.34ರಷ್ಟು ಬಂದಿದೆ. ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು ಬಾರದಂತಹ ವಿದ್ಯಾರ್ಥಿಗಳು ಪ್ರೌಢಶಾಲೆಗಳಿಗೆ ದಾಖಲಾಗುತ್ತಿರುವುದು ಸೇತುಬಂಧ ಪರೀಕ್ಷೆಗಳ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ. 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬುನಾದಿ ಶಿಕ್ಷಣದ ಕೊರತೆ ಇರುವುದರಿಂದ ಪ್ರೌಢಶಾಲಾ ಶಿಕ್ಷಕರು ಬುನಾದಿ ಶಿಕ್ಷಣ ನೀಡಬೇಕೇ ಅಥವಾ ಪಠ್ಯವಸ್ತು ಬೋಧಿಸಬೇಕೇ ಎನ್ನುವಂತಹ ದ್ವಂದದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ75ರಷ್ಟು ಫಲಿತಾಂಶದ ಗುರಿ ನೀಡಿರುವುದರಿಂದ ಪ್ರೌಢಶಾಲಾ ಶಿಕ್ಷಕರಿಗೆ ಒತ್ತಡ ಹೆಚ್ಚಾಗಿದೆ’ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

‘ಸಿಬಿಎಸ್‍ಇ ಮತ್ತು ಐಸಿಎಸ್‍ಸಿ ಪರೀಕ್ಷಾ ಪದ್ಧತಿಯಲ್ಲಿ ಆಂತರಿಕ ಮೌಲ್ಯಮಾಪನ 20 ಅಂಕ ಸೇರಿ ಶೇ 33 ಅಂಕಗಳಿಗೆ ಉತ್ತೀರ್ಣ ಮಾಡಲಾಗುತ್ತಿದೆ. ರಾಜ್ಯದ ಶಾಲೆಗಳಲ್ಲಿ ಶೇ 95 ಕ್ಕಿಂತ ಹೆಚ್ಚು ಫಲಿತಾಂಶ ಸಾಧನೆಯಾಗುತ್ತಿದೆ. ಆದರೆ, ರಾಜ್ಯ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನದಲ್ಲಿ 20 ಅಂಕಗಳನ್ನು ಪಡೆದರೂ, ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಭಾಷಾ ವಿಷಯದಲ್ಲಿ 35 ಮತ್ತು ಇನ್ನುಳಿದ ಐದು ವಿಷಯಗಳಲ್ಲಿ 28 ಅಂಕಗಳನ್ನು ಗಳಿಸಬೇಕಾಗಿದೆ. ಇದರಿಂದ ಫಲಿತಾಂಶ ಸಾಧನೆಯ ಮಟ್ಟ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಿಬಿಎಸ್‍ಇ ಮತ್ತು ಐಸಿಎಸ್‍ಸಿ ಪರೀಕ್ಷಾ ಪದ್ಧತಿಯಂತೆ ರಾಜ್ಯ ಪಠ್ಯಕ್ರಮವನ್ನೂ ಪುನರ್‌ ರಚಿಸಬೇಕು ಎಂದು ಇಲಾಖೆಗೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.