ADVERTISEMENT

ಮತ್ತೆ 245 ಮಂದಿಗೆ ‘ಕ್ಷಯ’

ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ನಡೆದ ಅಭಿಯಾನ

ಎಂ.ಮಹೇಶ
Published 17 ಜನವರಿ 2019, 13:03 IST
Last Updated 17 ಜನವರಿ 2019, 13:03 IST

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ 245 ಮಂದಿಗೆ ಕ್ಷಯ ರೋಗ ಇರುವುದನ್ನು ಪತ್ತೆ ಹಚ್ಚಲಾಗಿದೆ.

ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಈಚೆಗೆ ನಡೆಸಿದ ರೋಗ ಪತ್ತೆ ಅಭಿಯಾನದಲ್ಲಿ, 10,68,165 ಮಂದಿ ತಪಾಸಿಸಲಾಗಿದೆ. ಈ ಪೈಕಿ 7,420 ಸಂಶಯಾಸ್ಪದ ರೋಗಿಗಳನ್ನು ಗುರುತಿಸಿ, ಇವರಲ್ಲಿ 224 ಮಂದಿಗೆ ಶ್ವಾಸಕೋಶದ ಕ್ಷಯ ರೋಗ ಮತ್ತು 21 ಜನರಿಗೆ ಶ್ವಾಸಕೋಶೇತರ ಕ್ಷಯ ರೋಗವಿದೆ ಎಂದು ಗುರುತಿಸಲಾಗಿದೆ. ಹೋದ ವರ್ಷ ನಡೆದಿದ್ದ ಅಭಿಯಾನದ ಸಂದರ್ಭದಲ್ಲಿ 252 ಮಂದಿಗೆ ಕ್ಷಯ ರೋಗ ಇರುವುದನ್ನು ಪತ್ತೆ ಮಾಡಲಾಗಿತ್ತು.

ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನಕ್ಕಾಗಿ, ಜಿಲ್ಲೆಯಲ್ಲಿ 1,129 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗುತ್ತು. ಜಿಲ್ಲೆಯ ಶೇ 20ರಷ್ಟು ಅಂದರೆ 10.52 ಲಕ್ಷ ಜನಸಂಖ್ಯೆ ಗುರುತಿಸಿ ಮನೆ-ಮನೆಗೆ ಭೇಟಿ ನೀಡಲಾಗಿದೆ. ಇದಕ್ಕಾಗಿ 1,680 ಆರೋಗ್ಯ ಸಹಾಯಕರು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಪ್ರತಿ ತಂಡವೂ ಈ ಅವಧಿಯಲ್ಲಿ ನಿತ್ಯ 50ರಿಂದ 60 ಮನೆಗಳಿಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದೆ. ರೋಗ ಲಕ್ಷಣಗಳುಳ್ಳವರ ಕಫವನ್ನು ಸ್ಥಳದಲ್ಲೇ ಸಂಗ್ರಹಿಸಿ ನಿಯೋಜಿತ ಕಫ ತಪಾಸಣಾ ಕೇಂದ್ರಕ್ಕೆ ಕಳುಹಿಸಿದ್ದರು. ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಕ್ಷ-ಕಿರಣ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸಂಶಯಾಸ್ಪದ 1,365 ರೋಗಿಗಳ ಕ್ಷ-ಕಿರಣ ತಪಾಸಣೆ ನಡೆಸಲಾಗಿದೆ. ಈ ಪೈಕಿ ವಿಪರೀತ ಪಲಿತಾಂಶ ಬಂದ 201 ಸಂಶಯಾಸ್ಪದ ಕ್ಷಯ ರೋಗಿಗಳಿಗೆ ಸಿಬಿ–ನ್ಯಾಟ್ (ತ್ವರಿತ ಕ್ಷಯರೋಗ ತಪಾಸಣಾ ಯಂತ್ರ) ಬಳಸಲಾಯಿತು. ಇದರಲ್ಲಿ 24 ರೋಗಿಗಳನ್ನು ಪತ್ತೆ ಹಚ್ಚಲಾಗಿದೆ.

ADVERTISEMENT

ಚಿಕಿತ್ಸೆ ಆರಂಭ:

‘ಕ್ಷಯವನ್ನು ಅಧಿಸೂಚಿತ ರೋಗವೆಂದು ಸರ್ಕಾರ ಗುರುತಿಸಿದೆ. ಈ ಬಾರಿ ದೂರದೂರದ ಪ್ರದೇಶಗಳಲ್ಲಿ ಅಭಿಯಾನ ನಡೆಸಲಾಗಿದೆ. ವಿಶೇಷವಾಗಿ ವಸತಿ ಶಾಲೆ–ಕಾಲೇಜುಗಳಲ್ಲಿ ಇರುವವರನ್ನು ತಪಾಸಣೆಗೆ ಒಳಪಡಿಸಲಾಯಿತು. ಶ್ವಾಸಕೋಶದ ಕ್ಷಯ ರೋಗವುಳ್ಳವರಿಂದ ರೋಗ ಹರಡುವಿಕೆ ಪ್ರಮಾಣ ಜಾಸ್ತಿ ಇರುತ್ತದೆ. ಹೀಗಾಗಿ, ಅಧಿಸೂಚಿಸಿದ ಎಲ್ಲರಿಗೂ ತಕ್ಷಣದಿಂದಲೇ ಚಿಕಿತ್ಸೆ ಆರಂಭಿಸಲಾಗಿದೆ. ಅವರು ಕನಿಷ್ಠ 6 ತಿಂಗಳವರೆಗೆ ಅಥವಾ ಗುಣಮುಖರಾಗುವವರೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಉಚಿತವಾಗಿ ಚಿಕಿತ್ಸೆ ದೊರೆಯಲಿದೆ’ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶೈಲಜಾ ತಮ್ಮಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಅಥಣಿ, ಸವದತ್ತಿ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಇವರಲ್ಲಿ ಶೇ 80ರಷ್ಟು ರೋಗಿಗಳು ಸಾಮಾನ್ಯವಾಗಿ 15 ವರ್ಷದಿಂದ 80 ವರ್ಷದವರೇ ಆಗಿದ್ದಾರೆ. ದುಡಿಯುವ ವಯಸ್ಸಿನವರಲ್ಲಿ ಈ ಸಮಸ್ಯೆ ಜಾಸ್ತಿ. ಏಕೆಂದರೆ, ಅವರು ಆರೋಗ್ಯದ ಕಡೆಗೆ ಗಮನ ಕೊಟ್ಟಿರುವುದಿಲ್ಲ. ಕೆಮ್ಮನ್ನು ನಿರ್ಲಕ್ಷ್ಯ ಮಾಡಿರುತ್ತಾರೆ’ ಎನ್ನುತ್ತಾರೆ ಅವರು.

ಪ್ರೋತ್ಸಾಹಧನ:

‘2 ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು. ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು. ಸಂಜೆ ಜ್ವರ ಮತ್ತು ರಾತ್ರಿ ವೇಳೆ ಬೆವರುವುದು. ತೂಕ ಕಡಿಮೆಯಾಗುವುದು ಹಾಗೂ ಹಸಿವಾಗದಿರುವುದು ರೋಗದ ಲಕ್ಷಣಗಳಾಗಿವೆ. ಈ ಲಕ್ಷಣಗಳಿರುವವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ದೈನಂದಿನ ಉಚಿತ ಚಿಕಿತ್ಸೆ ಲಭ್ಯವಿದೆ. ಕ್ಷಯ ರೋಗಿಗಳ ಮಾಹಿತಿ ನೀಡುವ ಪ್ರತಿ ಖಾಸಗಿ ವೈದ್ಯರಿಗೆ ₹ 500 ಪ್ರೋತ್ಸಾಹಧನ ನೀಡಲಾಗುವುದು. ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಳಿಗೂ ನಿಕ್ಷಯ ಪೌಷ್ಠಿಕ ಯೋಜನೆಯಡಿ ತಿಂಗಳಿಗೆ ₹ 500, ಔಷಧ ನಿರೋಧಕವನ್ನು ಉಚಿತವಾಗಿ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.