ADVERTISEMENT

ಬೆಳಗಾವಿ| ಹಿಂಗಾರು ಹಂಗಾಮು: ಶೇ 70 ಬಿತ್ತನೆ

ಈ ಸಾಲಿನಲ್ಲಿ 3.24 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಎಂ.ಮಹೇಶ
Published 27 ನವೆಂಬರ್ 2020, 10:57 IST
Last Updated 27 ನವೆಂಬರ್ 2020, 10:57 IST
ಶಿವನಗೌಡ ಪಾಟೀಲ
ಶಿವನಗೌಡ ಪಾಟೀಲ   

ಬೆಳಗಾವಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದು, ಈವರೆಗೆ ಶೇ 70ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಈ ಹಂಗಾಮಿನಲ್ಲಿ 3.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 2.15 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅಕ್ಟೋಬರ್‌ನಲ್ಲಿ ಉತ್ತಮ ಮಳೆ ಬಿದ್ದಿತು. ಇದರ ಪರಿಣಾಮ ಬಿತ್ತನೆ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಮೂಹ ಬೇಸಾಯದಲ್ಲಿ ತೊಡಗಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಜಿಲ್ಲೆಯ ವಿವಿಧೆಡೆ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ನದಿಗಳ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾಳಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ರೈತರಿದ್ದರು. ನಷ್ಟವನ್ನೂ ಅನುಭವಿಸಿದ್ದಾರೆ. ಹೀಗಾಗಿ, ಹಿಂಗಾರಿನಲ್ಲಿ ಬೆಳೆಗಳು ತಮ್ಮ ಕೈಹಿಡಿಯಬಹುದು ಎಂಬ ಆಶಾಭಾವ ಅವರದಾಗಿದೆ.

ADVERTISEMENT

ಪ್ರಮುಖ ಬೆಳೆಗಳು:

ಪ್ರಮುಖವಾಗಿ ಈ ಹಂಗಾಮಿನಲ್ಲಿ ಹಿಂಗಾರಿ ಜೋಳ 87ಸಾವಿರ ಹೆಕ್ಟೇರ್, ಕಡಲೆ 79ಸಾವಿರ ಹೆಕ್ಟೇರ್, ಗೋಧಿ 29ಸಾವಿರ ಹೆಕ್ಟೇರ್, ಮುಸುಕಿನಜೋಳ 12ಸಾವಿರ ಹೆಕ್ಟೇರ್, ಸೂರ್ಯಕಾಂತಿ ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.

ಗೋಕಾಕ, ರಾಯಬಾಗ, ಚಿಕ್ಕೋಡಿ, ಅಥಣಿ, ಸವದತ್ತಿ ಮೊದಲಾದ ಕಡೆಗಳಲ್ಲಿ ಕಬ್ಬಿನ ಕಟಾವು ಮುಗಿದ ನಂತರ ಗೋಧಿ, ಕಡಲೆ, ಮೆಕ್ಕೆಜೋಳವನ್ನು ಬಿತ್ತುವುದು ವಾಡಿಕೆ. ಹೀಗಾಗಿ, ನವೆಂಬರ್‌ ಅಂತ್ಯದವರೆಗೆ ಇನ್ನಷ್ಟು ಪ್ರದೇಶದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದೆ.

ಅ.1ರಿಂದ ನ.24ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ ಸರಾಸರಿ 125 ಮಿ.ಮೀ. ಇತ್ತು. ಆದರೆ, 141 ಮಿ.ಮೀ. ಮಳೆಯಾಗಿದೆ. ಅಂದರೆ ಶೇ 13ರ‌ಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಅಕ್ಟೋಬರ್‌ನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿತ್ತು.

ಕೊರತೆ ಇಲ್ಲ:

ಈ ನಡುವೆ, ‘ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಬರಗಾಲ ತಡೆಯುವ ಯೋಜನೆ’ಯನ್ನು ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

‘ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 20ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಇದರಲ್ಲಿ ಈವರೆಗೆ 15ಸಾವಿರ ಕ್ವಿಂಟಲ್ ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ. 27ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ರಸಗೊಬ್ಬರ ಅಥವಾ ಬಿತ್ತನೆ ಬೀಜದ ಕೊರತೆ ಇಲ್ಲ’ ಎಂದುಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಡಲೆ ಹಾಗೂ ಜೋಳ ಬಿತ್ತುವ ಮುನ್ನ ಬೀಜೋಪಚಾರ ಮಾಡಿದರೆ ಹಾಗೂ ಸುಧಾರಿತ ಬೇಸಾಯ ಕ್ರಮಗಳನ್ನು ಕೈಗೊಂಡರೆ ಹೆಚ್ಚಿನ ಇಳುವರಿ ಪಡೆಯಬಹುದು. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡಗಳನ್ನು ರಚಿಸಿ ಅವರ ಮೂಲಕ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಿಂಗಾರು ಬೆಳೆಗಳ ತಾಂತ್ರಿಕ ಆಂದೋಲನ ನಡೆಸಲಾಗಿದೆ’ ಎಂದು ತಿಳಿಸಿದರು.

***

ಕಡಲೆ ಮತ್ತು ಜೋಳದ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸುವ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದಿದೆ
-ಶಿವನಗೌಡ ಪಾಟೀಲ
ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.