ADVERTISEMENT

ನೈಸರ್ಗಿಕ ಕೃಷಿ ಅರಿವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 16:25 IST
Last Updated 26 ಜೂನ್ 2019, 16:25 IST

ಬೆಳಗಾವಿ: ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಬೆಳಗಾವಿ ಹಾಗೂ ಬೈಲಹೊಂಗಲ ತಾಲ್ಲೂಕುಗಳ ರೈತರಿಗಾಗಿ ತಾಲ್ಲೂಕಿನ ಸುತಗಟ್ಟಿಯ ಪ್ರಗತಿಪರ ಕೃಷಿಯ ಅಭಯ್ ಮುತಾಲಿಕ್ ದೇಸಾಯಿ ಅವರ ತೋಟದಲ್ಲಿ ‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ ಕುರಿತು ಹಂಗಾಮು ಪೂರ್ವ ಕಾರ್ಯಾಗಾರ ಮತ್ತು ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು.

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ (ವಲಯ 8) ಮುಖ್ಯಸ್ಥ ಡಾ.ಆನಂದ ಬ. ಮಾಸ್ತಿಹೊಳಿ ಮಾತನಾಡಿ, ‘ನೈಸರ್ಗಿಕ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚಿಸಬಹುದು. ಕಡಿಮೆ ವೆಚ್ಚದಲ್ಲಿ ನೈಸರ್ಗಿಕವಾಗಿ ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯಬಹುದು’ ಎಂದು ತಿಳಿಸಿದರು.

ಅಭಯ್ ದೇಸಾಯಿ ಅವರು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿನ ವೈವಿಧ್ಯತೆ, ಬಹುಬೆಳೆ ಬೇಸಾಯ ಪದ್ಧತಿ, ಗೊಬ್ಬರ ತಯಾರಿಕೆ, ಉತ್ಪನ್ನಗಳಿಗೆ ಇರುವ ಮಾರುಕಟ್ಟೆ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಸಂಶೋಧನಾ ಸಹಾಯಕರಾದ ಡಾ.ಶ್ರೀದೇವಿ ರವಿಕಿರಣ ಕಣಬರಗಿ ಬೀಜಾಮೃತ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಕೀಟಗಳ ನಿರ್ವಹಣೆಗೆ ಸಂಬಂಧಿಸಿದ ನೀಮಾಸ್ತ್ರ, ಅಗ್ನಿಯಾಸ್ತ್ರ ಹಾಗೂ ಬ್ರಹ್ಮಾಸ್ತ್ರ ವಿಧಾನಗಳ ಕುರಿತು ಡಾ.ಅಂಜನಕುಮಾರ ನಾಯಕ್‌ ತಿಳಿಸಿದರು. ಡಾ.ಉಮ್ಮೆ ಸಲ್ಮಾ ಸನದಿ ಮಣ್ಣು ಪರೀಕ್ಷೆ ಬಗ್ಗೆ ತಿಳಿಸಿಕೊಟ್ಟರು. ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ಡಾ.ಶಿವಬಸು ಖಾನಗೌಡರ ಮಾಹಿತಿ ನೀಡಿದರು.

ಬೆಳಗಾವಿಯ ಕೃಷಿ ಅಧಿಕಾರಿ ಅರುಣ ಕಾಪ್ಸಿ, ಸಂಪನ್ಮೂಲ ವ್ಯಕ್ತಿಗಳು, 90 ಮಂದಿ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.