ADVERTISEMENT

ಅಖಿಲ ಭಾರತ ಸಹಕಾರ ಸಪ್ತಾಹ 18ಕ್ಕೆ

ಬೆಳಗಾವಿಯಲ್ಲಿ ಆಯೋಜನೆ: ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:41 IST
Last Updated 7 ನವೆಂಬರ್ 2020, 15:41 IST
ಬೆಳಗಾವಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ‘ನಂದಿನಿ ಸೆಟ್‌ ಕರ್ಡ್‌’ (ಮೊಸರು) ಉತ್ಪನ್ನವನ್ನು  ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ‘ನಂದಿನಿ ಸೆಟ್‌ ಕರ್ಡ್‌’ (ಮೊಸರು) ಉತ್ಪನ್ನವನ್ನು  ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಡುಗಡೆ ಮಾಡಿದರು   

ಬೆಳಗಾವಿ: ‘ನಗರದಲ್ಲಿ ನ.18ರಂದು 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು’ ಎಂದು ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಮಹಾಂತೇಶ ನಗರದಲ್ಲಿರುವ ಬೆಮುಲ್ ಆವರಣದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಬಾರಿಯ ಸಹಕಾರ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ಕೆಎಂಎಫ್ ವಹಿಸಿಕೊಳ್ಳಲಿದೆ. ಡಿಸಿಸಿ ಬ್ಯಾಂಕ್, ರಾಜ್ಯ ಸಹಕಾರಿ ಮಹಾಮಂಡಳಿ, ಬೆಮುಲ್, ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಜಿಲ್ಲೆಯ ವಿವಿಧ ಸಂಘಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಲಿವೆ’ ಎಂದು ಹೇಳಿದರು.

ADVERTISEMENT

‘ಸಹಕಾರಿ ರಂಗದ ಕಾರ್ಯಕ್ಷಮತೆ ಹಾಗೂ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಪ್ತಾಹ ನಡೆಸಲಾಗುತ್ತಿದೆ. ಈ ಬಾರಿ ‘ರೈತ ಸಹಕಾರಿ’ ಘೋಷವಾಕ್ಯದಲ್ಲಿ ಆಚರಿಸಲಾಗುವುದು. ಉದ್ಘಾಟನೆ ಕಾರ್ಯಕ್ರಮದಲ್ಲಿ ‘ನಂದಿನಿ’ ಬ್ರಾಂಡ್‌ನ 9 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ನಂದಿನಿ ಸೆಟ್‌ ಕರ್ಡ್‌’ (ಮೊಸರು) ಉತ್ಪನ್ನವನ್ನು ಬಿಡುಗಡೆ ಮಾಡಿದರು. ತಾಲ್ಲೂಕಿನ ಕೃತಕ ಗರ್ಭದಾರಣೆ ಯೋಜನೆಯಲ್ಲಿ ನಿಯೋಜಿಸಿರುವ ಕಾರ್ಯಕರ್ತರಿಗೆ ‘ಇನಾಫ್’ ತಂತ್ರಾಂಶವಿರುವ ಟ್ಯಾಬ್‌ಗಳನ್ನು ವಿತರಿಸಿದರು.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಉದಯಸಿಂಗ್ ಶಿಂಧೆ, ಬಾಬು ಕಟ್ಟಿ, ಎಸ್.ಎಸ್. ಮುಗಳಿ, ವಿರೂಪಾಕ್ಷಿ ಈಟಿ, ಮಲ್ಲು ಪಾಟೀಲ, ಪ್ರಕಾಶ ಅಂಬೋಜಿ, ಅಪ್ಪಾಸಾಬ ಅವತಾಡೆ, ಬಾಬು ವಾಘ್ಮೋಡೆ, ಕಲ್ಲಪ್ಪ ಗಿರೆನ್ನವರ, ಸುರೇಶ ಪಾಟೀಲ, ಸವಿತಾ ಖಾನಪ್ಪಗೋಳ, ಸಹಕಾರಿ ಜಂಟಿ ನಿರ್ದೇಶಕ ಜಿ.ಎಂ. ಪಾಟೀಲ, ಬೆಮುಲ್ ವ್ಯವಸ್ಥಾಪಕ ನಿರ್ದೇಶಕ ಒಬೇದುಲ್ಲಾ ಖಾನ್ ಇದ್ದರು.

ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.