ADVERTISEMENT

ಗೊಡಚಿಯಲ್ಲಿ ‘ಹೊಸ್ತಿಲ ಹುಣ್ಣಿಮೆ’ ಸಂಭ್ರಮ

‘ಬೆಳವಲ’ ನಾಡಲ್ಲಿ ಡಿ. 2ರಿಂದಲೇ ಶುರುವಾಗಿವೆ ಧಾರ್ಮಿಕ ಕಾರ್ಯಕ್ರಮ

ಚನ್ನಪ್ಪ ಮಾದರ
Published 9 ಡಿಸೆಂಬರ್ 2019, 19:45 IST
Last Updated 9 ಡಿಸೆಂಬರ್ 2019, 19:45 IST
ಗೊಡಚಿ ವೀರಭದ್ರ ದೇವಸ್ಥಾನದ ವಿಹಂಗಮ ನೋಟ
ಗೊಡಚಿ ವೀರಭದ್ರ ದೇವಸ್ಥಾನದ ವಿಹಂಗಮ ನೋಟ   

ರಾಮದುರ್ಗ: ಮರಾಠಿ ಸಂಸ್ಥಾನಿಕರ ಕಾಲದ ಜಾಗೃತ ಕ್ಷೇತ್ರ, ಉತ್ತರ ಕರ್ನಾಟಕದ ಧರ್ಮಸ್ಥಳ ಎಂದೇ ಖ್ಯಾತಿ ಪಡೆದ ಗೊಡಚಿ ಕ್ಷೇತ್ರದ ವೀರಭದ್ರೇಶ್ವರ ರಥೋತ್ಸವವು ಹೊಸ್ತಿಲ ಹುಣ್ಣಿಮೆಯ ದಿನವಾದ ಡಿ. 12ರ ಸಂಜೆ ವಿಜೃಂಭಣೆಯಿಂದ ಜರುಗಲಿದೆ. ಇದಕ್ಕೆ ಎರಡು ದಿನಗಳ ಮುಂಚಿನಿಂದಲೇ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ಇದಕ್ಕಾಗಿ ಪೂರ್ವಸಿದ್ಧ ಮಾಡಿಕೊಳ್ಳಲಾಗಿದೆ.

ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವವಾಗಿ ಪ್ರಸಿದ್ಧಿ ಪಡೆದಿರುವ ಜಾಗೃತ ದೇವ ವೀರಭದ್ರನ ಜಾತ್ರೆ ಈ ಭಾಗದಲ್ಲಿಯೇ ಖ್ಯಾತಿ ಪಡೆದಿದೆ. ಗೊಡಚಿ ವೀರಭದ್ರೇಶ್ವರ ದೇವಸ್ಥಾನ ನಿರಂತರ ಅನ್ನದಾಸೋಹ ನಡೆಸುತ್ತ ಉತ್ತರ ಕರ್ನಾಟಕದ ಧರ್ಮಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರತಿ ಸಲದಂತೆ ಈ ಸಲವೂ ಡಿ. 12ರಂದು (ಹೊಸ್ತಿಲ ಹುಣ್ಣಿಮೆ) ಸಂಜೆ 5ಕ್ಕೆ ವೀರಭದ್ರೇಶ್ವರನ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ನಿಮಿತ್ತ ಡಿ. 2ರ ಮಧ್ಯರಾತ್ರಿಯಿಂದ 11 ಜನ ಶಾಸ್ತ್ರಿಗಳಿಂದ ಆರಂಭವಾಗಿರುವ ವೀರಭದ್ರ ದೇವರು, ಭದ್ರಕಾಳಿ ಮಾತೆಗೆ ಮಹಾಮಸ್ತಕಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮ ಡಿ.12ರವರೆಗೂ ನೆರವೇರಲಿದೆ. ಡಿ. 16ರಂದು ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಜರುಗಲಿದೆ.

ADVERTISEMENT

ಜಾತ್ರೆಯ ವಿಶೇಷ: ಪ್ರತಿ ಜಾತ್ರೆಗಳಲ್ಲಿ ಒಂದಿಲ್ಲ ಒಂದು ವಿಶೇಷತೆ ಇರುವುದು ಸಹಜ. ಇಲ್ಲಿ ಮಾತ್ರ ಬಳವೊಲು ಹಣ್ಣಿನ ವಿಶೇಷತೆ ಜಾತ್ರೆಯ ಖ್ಯಾತಿ ಇಮ್ಮಡಿಗೊಳಿಸಿದೆ. ಬೆಳವಲ ಹಣ್ಣಿನ ಜತೆ ಬೋರೆ ಹಣ್ಣು, ಬಾಳೆ ಹಣ್ಣಿನ ವ್ಯಾಪಾರವೂ ಜೋರಾಗಿಯೇ ನಡೆಯುತ್ತದೆ. ಬೆಳವಲ ಹಣ್ಣಿನ ವಿಶೇಷ ಜಾತ್ರೆಗೆ ಬರುವ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಜಾತ್ರೆಗೆ ಬರುವ ಪ್ರತಿಯೊಬ್ಬರು ಈ ಹಣ್ಣಿನ ಖರೀದಿಗೆ ಪ್ರಾಮುಖ್ಯತೆ ನೀಡುತ್ತಾರೆ.

ಜಾತ್ರಾ ಸಮಿತಿ ಮತ್ತು ಗೊಡಚಿ ಗ್ರಾಮ ಪಂಚಾಯಿತಿ ವತಿಯಿಂದ ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಮಾಡಿಕೊಟ್ಟಿವೆ. ದೇವಸ್ಥಾನದ ಸುತ್ತಲೂ ವಸತಿಗೃಹಗಳು, ಕಲ್ಯಾಣಮಂಟಪಗಳು, ಶೌಚಾಲಯಗಳು, ಸಾಲಾಗಿ ನಿರ್ಮಿಸಿದ ವ್ಯಾಪಾರಿ ಮಳಿಗೆಗಳು ಭಕ್ತರಿಗೆ ಅನುಕೂಲವಾಗಿವೆ. ಜಾತ್ರೆ ಸಮಯಕ್ಕೆ ಅಚ್ಚುಕಟ್ಟಾಗಿ ನಿರ್ಮಿಸಿದ ತಾತ್ಕಾಲಿಕ ವ್ಯಾಪಾರಿ ಮಳಿಗೆಗಳು ಭಕ್ತರ ತೊಂದರೆಗಳನ್ನು ನೀಗಿಸಬಲ್ಲವು. ಜಾತ್ರೆ ದಿನ ಭಕ್ತರಿಗೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ದೂರದ ಊರುಗಳಿಂದ: ಗೊಡಚಿ ಗ್ರಾಮದ ಸುತ್ತಲಿನ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್‌, ಟಂಟಂ, ಬೈಸಿಕಲ್‌, ಲಾರಿಗಳಲ್ಲಿ ಬಂದು ದೇವಸ್ಥಾನದ ಮುಂದಿನ ವಿಶಾಲವಾದ ಬಯಲಿನಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೇ ಟೆಂಟ್‌ ಹಾಕಿಕೊಂಡು ಐದು ದಿನಗಳವರೆಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದಲ್ಲದೇ ದೂರದ ಜಿಲ್ಲೆಗಳು ಸೇರಿದಂತೆ ಪಕ್ಕದ ರಾಜ್ಯಗಳಿಂದಲೂ ಭಕ್ತರು ಬಂದು ಜಾತ್ರೆ ಮಾಡುತ್ತಾರೆ.

ರಾಮದುರ್ಗ ಮತ್ತು ತೊರಗಲ್‌ ಗ್ರಾಮಗಳು ರಾಜಮನೆತನದ ಪರಂಪರೆ ಹೊಂದಿವೆ. ಪ್ರಾಚೀನ ಸಂಸ್ಥಾನಿಕರ ಕಾಲದಲ್ಲಿ ಗೊಡಚಿ ಕ್ಷೇತ್ರವು ತೊರಗಲ್‌ದ ಶಿಂಧೆ ಮನೆತನದ ಒಡೆತನಕ್ಕೆ ಸೇರಿತ್ತು. ಶಿಂಧೆ ಮನೆತನವು ಮೂಲತಃ ಮರಾಠಿ ಸಂಸ್ಥಾನಿಕರಿಗೆ ಸೇರಿದ್ದರೂ ಈ ಭಾಗದಲ್ಲಿ ಹೆಚ್ಚಾಗಿರುವ ಲಿಂಗಾಯತ ಸಮುದಾಯದವರ ಕುಲದೇವರು ಎನಿಸಿಕೊಂಡಿರುವ ವೀರಭದ್ರ ದೇವರಿಗೂ ಸಾಕಷ್ಟು ಮಹತ್ವ ನೀಡಿ ದೇವಸ್ಥಾನದ ಉನ್ನತಿಗಾಗಿ ಶ್ರಮಿಸಿದ್ದಾರೆ. ಇಂದಿಗೂ ಈ ಕ್ಷೇತ್ರದ ಅಭಿವೃದ್ಧಿ ಮತ್ತು ಜಾತ್ರೆಯ ಜವಾಬ್ದಾರಿಯನ್ನು ಶಿಂಧೆ ಮನೆತನದವರೇ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.

ಜಾತ್ರೆಯಲ್ಲಿ ಲಕ್ಷಾಂತರ ಜನರು ಓಡಾಡುವುದರಿಂದ ಆ ಪ್ರದೇಶದಲ್ಲಿ ಧೂಳಿನ ವಾತಾವರಣ ಇರುತ್ತದೆ. ಜಾತ್ರೆಗೆ ಬರುವ ಭಕ್ತರ ಆರೋಗ್ಯದ ದೃಷ್ಟಿಯಿಂದ ಉತ್ತಮ ವಾತಾವರಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆರೋಗ್ಯ ಇಲಾಖೆ ಜಾತ್ರೆಗೆ ಬರುವ ಭಕ್ತರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯವಿದೆ. ಕಳವು ಪ್ರಕರಣಗಳು ನಡೆಯದಂತೆ ಪೊಲೀಸರು ನಿಗಾ ವಹಿಸಬೇಕು ಎನ್ನುವ ಆಗ್ರಹ ಭಕ್ತರದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.