ADVERTISEMENT

ಬೆಳಗಾವಿಗೆ ಅಂಗಡಿ, ಚಿಕ್ಕೋಡಿ ಯಾರಿಗೆ?

ರಮೇಶ ಕತ್ತಿ, ಅಣ್ಣಾಸಾಹೇಬ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 15:31 IST
Last Updated 21 ಮಾರ್ಚ್ 2019, 15:31 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಸುರೇಶ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ. ಜಿಲ್ಲೆಯ ಇನ್ನೊಂದು ಕ್ಷೇತ್ರವಾದ ಚಿಕ್ಕೋಡಿಗೆ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಬಾಕಿ ಉಳಿಸಿದೆ.

ಸತತ ಮೂರು ಚುನಾವಣೆಗಳಿಂದ ಗೆದ್ದಿರುವ ಅಂಗಡಿ 4ನೇ ಬಾರಿಗೆ ಸ್ಪರ್ಧಿಸಲಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೆ ಮುನ್ನ, ಅವರ ವಿರುದ್ಧ ಪಕ್ಷದಲ್ಲಿಯೇ ಕೆಲವರು ಅಪಸ್ವರ ಎತ್ತಿದ್ದರು. ಈ ಬಾರಿ ಅಭ್ಯರ್ಥಿ ಬದಲಾಯಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನವನ್ನೂ ನಡೆಸಿದ್ದರು. ನಂತರ ಇದರ ದನಿ ಕ್ಷೀಣಿಸಿತ್ತು. ಆದರೆ, ಇದ್ಯಾವುದಕ್ಕೂ ಹೈಕಮಾಂಡ್ ಸೊಪ್ಪು ಹಾಕಿಲ್ಲ.

‘ನನಗೆ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ’ ಎಂದು ಹೇಳುತ್ತಲೇ ಬಂದಿದ್ದ ಅವರು, ಕ್ಷೇತ್ರದಾದ್ಯಂತ ಸಂಚಾರವನ್ನು ಆರಂಭಿಸಿದ್ದರು. ನಿತ್ಯವೂ ನಗರದ ಕೆಲವು ಬಡಾವಣೆಗಳಿಗೆ ಭೇಟಿ ನೀಡಿ, ಚಾಯ್ ಪೆ ಚರ್ಚಾ ಕಾರ್ಯಕ್ರಮದ ಮೂಲಕ ಪ್ರಚಾರವನ್ನೂ ನಡೆಸುತ್ತಿದ್ದಾರೆ. ಕೇಂದ್ರದ ಕಾರ್ಯಕ್ರಮಗಳ ಕುರಿತು ತಿಳಿಸುತ್ತಿದ್ದಾರೆ. ಟಿಕೆಟ್‌ ಪಡೆದುಕೊಳ್ಳುವ ಮೂಲಕ ಅವರು ತಮ್ಮ ವಿರೋಧಿಗಳ ವಿರುದ್ಧ ಮೇಲುಗೈ ಸಾಧಿಸಿದ್ದಾರೆ. ಟಿಕೆಟ್ ತಪ್ಪಿಸಲು ಕೆಲವರು ನಡೆಸಿದ ಪ್ರಯತ್ನ ಕೊನೆಗೂ ವಿಫಲವಾಗಿದೆ.

ADVERTISEMENT

‘ಚಿಕ್ಕೋಡಿ ಕ್ಷೇತ್ರದಲ್ಲಿ ಹೋದ ಬಾರಿ ಸ್ಪರ್ಧಿಸಿದ್ದ ರಮೇಶ ಕತ್ತಿ, ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕೂಡ ಆಕಾಂಕ್ಷಿಯಾಗಿದ್ದಾರೆ. ಮಾಜಿ ಶಾಸಕ ಲಕ್ಷ್ಮಣ ಸವದಿ ಹೆಸರು ಕೂಡ ಕೇಳಿಬಂದಿದೆ. ಹೀಗಾಗಿ, ಯಾರಿಗೆ ಟಿಕೆಟ್‌ ಕೊಡಬೇಕು ಎನ್ನುವ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಅಳೆದುತೂಗುವ ಪ್ರಕ್ರಿಯೆಯಲ್ಲಿ ತೊಡಗಿದೆ. ತರಾತುರಿಯಲ್ಲಿ ಟಿಕೆಟ್‌ ‍ಪ್ರಕಟಿಸದೇ, ಆಕಾಂಕ್ಷಿಗಳೆಲ್ಲರವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಉದ್ದೇಶಿಸಲಾಗಿದೆ. ಭಿನ್ನಮತಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ, 2ನೇ ಪಟ್ಟಿಯಲ್ಲಿ ಅಭ್ಯರ್ಥಿ ಯಾರು ಎನ್ನುವುದು ಗೊತ್ತಾಗಲಿದೆ’ ಎಂದು ಮುಖಂಡರೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.