ಬೆಳಗಾವಿ: ‘ರಾಜ್ಯ ಸರ್ಕಾರ ಜನರ ಕೂಗು ಕೇಳಿಸಿಕೊಳ್ಳುವ ಸಂವೇದನೆಯನ್ನೇ ಕಳೆದುಕೊಂಡಿದೆ. ಆಶಾ ಕಾರ್ಯಕರ್ತೆಯರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಗೌರವಧನ ನೀಡುತ್ತಿಲ್ಲ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಾಸಿಕ ₹10 ಸಾವಿರ ಗೌರವಧನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಎರಡನೇ ದಿನವಾದ ಬುಧವಾರ ನಡೆದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
‘ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ, ಭರವಸೆ ನೀಡಿದ್ದರು. ಎಂಟು ತಿಂಗಳಾದರೂ ಬೇಡಿಕೆ ಈಡೇರಿಸಿಲ್ಲ. ಈಗ ಹೆಣ್ಣುಮಕ್ಕಳು ಮತ್ತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೂ ಸರ್ಕಾರಕ್ಕೆ ಸಂಬಂಧಿಸಿದ ಸಚಿವರಾಗಲಿ, ಅಧಿಕಾರಿಗಳಾಗಲೀ ಸಂಕಷ್ಟ ಕೇಳಿಲ್ಲ’ ಎಂದು ದೂರಿದರು.
ಮಳೆಯಲ್ಲೇ ಧರಣಿ: ಸತತ ಮಳೆ ಮಧ್ಯೆಯೂ ಜಿಲ್ಲಾಧಿಕಾರಿ ಕಚೇರಿ ಎದುರಿನ ಟೆಂಟ್‌ನಲ್ಲೇ ಕಾರ್ಯಕರ್ತೆಯರು ಮಲಗಿದ್ದರು. ಅಂಗಾರಕ ಸಂಕಷ್ಟಿ ಹಿನ್ನೆಲೆಯಲ್ಲಿ ಮಂಗಳವಾರ ಉಪಾಹಾರವಷ್ಟೇ ಸೇವಿಸಿದ್ದ ಕಾರ್ಯಕರ್ತೆಯರು ಬಳಲಿ ಬಸವಳಿದಿದ್ದರು. ರಾತ್ರಿ ಚಂದ್ರ ದರ್ಶನವಾದ ನಂತರ ರಸ್ತೆಯಲ್ಲೇ ಕುಳಿತು ಎಲ್ಲರೂ ಊಟ ಮಾಡಿದರು. ಬುಧವಾರ ಬೆಳಿಗ್ಗೆ ಸಂಬಂಧಿಕರ ಮನೆ, ಹಾಸ್ಟೆಲ್ ಮತ್ತಿತರ ಕಡೆ ಹೋಗಿ ಸ್ನಾನ ಮಾಡಿ ಮತ್ತೆ ಧರಣಿ ಸತ್ಯಾಗ್ರಹದಲ್ಲಿ ಬಂದು ಪಾಲ್ಗೊಂಡರು.
ರೈತ ಸಂಘಟನೆ ಸೇರಿದಂತೆ ಹಲವರು ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಆಶಾ ಕಾರ್ಯಕರ್ತೆಯರ ಸಂಕಷ್ಟದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ಪತ್ರ ಬರೆದು ಮನವರಿಕೆ ಮಾಡುತ್ತೇನೆ-ಈರಣ್ಣ ಕಡಾಡಿ, ರಾಜ್ಯಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.