ಅಥಣಿ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅಡಹಳ್ಳಟ್ಟಿಯ ನಾಯಿಕ ವಸತಿ ತೋಟದ ರಸ್ತೆ ಹಾಳಾಗಿರುವ ಕಾರಣ, ಮನೆಯವರೆಗೆ ಆಂಬುಲೆನ್ಸ್ ಬಾರದೆ ಬಾಣಂತಿ ಮತ್ತು ಶಿಶುವನ್ನು 1.5 ಕಿ.ಮೀ ಹೆಗಲ ಮೇಲೆ ಹೊತ್ತು ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿದ ಘಟನೆ ಗುರುವಾರ ನಡೆದಿದೆ.
ಗರ್ಭಿಣಿ ಶಿಲ್ಪಾ ನಾಯಿಕ ಅವರಿಗೆ ಗುರುವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ರಸ್ತೆ ಹಾಳಾದ ಕಾರಣ ಮನೆಯವರೆಗೆ ಆಂಬುಲೆನ್ಸ್ ಬರುವುದಿಲ್ಲ ಎಂದು ಚಾಲಕ ಹೇಳಿದರು. ಈ ಮಧ್ಯೆ, ಶಿಲ್ಪಾ ಮನೆಯಲ್ಲೇ ಶಿಶುವಿಗೆ ಜನ್ಮ ನೀಡಿದರು. ಹೆರಿಗೆ ನಂತರ ಬಾಣಂತಿ ಮತ್ತು ಶಿಶುವನ್ನು ಹೆಗಲ ಮೇಲೆ ಹೊತ್ತು, ಕಾಲ್ನಡಿಗೆ ಮೂಲಕ ಕುಟುಂಬದವರು ಸಾಗಿದರು. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ–ಮಗು ಇಬ್ಬರೂ ಈಗ ಆರೋಗ್ಯದಿಂದ ಇದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ರಸ್ತೆ ಸುಧಾರಣೆಗೆ ಅನುದಾನ ಮಂಜೂರಾದರೂ, ಕಾಮಗಾರಿ ಕೈಗೊಳ್ಳದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ರಸ್ತೆ ಕಾಮಗಾರಿ ಮಾರ್ಚ್‌ನಲ್ಲೇ ಕೈಗೊಳ್ಳಬೇಕಿತ್ತು. ಅನಿವಾರ್ಯ ಕಾರಣದಿಂದ ವಿಳಂಬವಾಗಿದೆ’ ಎಂದು ಪಿಡಿಒ ಸಿದ್ದಪ್ಪ ತುಂಗಳ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.