ADVERTISEMENT

ಸಾಲ ಮನ್ನಾ ಯೋಜನೆ: ಅಥಣಿಯ 36 ಸಾವಿರ ರೈತರಿಗೆ ಲಾಭ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:40 IST
Last Updated 17 ಅಕ್ಟೋಬರ್ 2019, 14:40 IST
ಪೋಟೋ ಶೀಷರ್ಿಕೆಃ(17ಅಥಣಿ2) ಶಂಕರ ಮಾಡಲಗಿ ಮಾತನಾಡುವ ದೃಶ್ಯ  
ಪೋಟೋ ಶೀಷರ್ಿಕೆಃ(17ಅಥಣಿ2) ಶಂಕರ ಮಾಡಲಗಿ ಮಾತನಾಡುವ ದೃಶ್ಯ     

ಅಥಣಿ: ‘ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೊಳಿಸಿದ ರೈತರ ಸಾಲ ಮನ್ನಾ ಯೋಜನೆಯಲ್ಲಿ ಹೆಚ್ಚಿನ ಲಾಭ ಪಡೆದಿರುವುದು ಅಥಣಿ ವಿಧಾನಸಭಾ ಕ್ಷೇತ್ರ. ಇಲ್ಲಿನ 36ಸಾವಿರ ಮಂದಿಗೆ ಇದರಿಂದ ಲಾಭವಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ತಿಳಿಸಿದರು.

ಗುರುವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಯೋಜನೆಯ ಲಾಭ ಪಡೆದುಕೊಂಡ ಕುಟುಂಬದವರು, ಮುಂಬರುವ ಉಪ ಚುನಾವಣೆಯಲ್ಲಿ ಕನಿಷ್ಠ ಎರಡು ಮತಗಳನ್ನು ಹಾಕಿದರೆ ನಮ್ಮ ಪಕ್ಷ 70ಸಾವಿರ ಮತಗಳನ್ನು ಪಡೆಯಲಿದೆ. ನಮ್ಮ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ’ ಎಂದರು.

ADVERTISEMENT

‘ರೈತ ನಾಯಕ ಎಂದು ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಸಾಲ ಮನ್ನಾ ಅಸಾಧ್ಯವೆಂದು ಹೇಳಿದ್ದಾರೆ. ಇದು ಅವರಿಗೆ ರೈತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ನೆರೆ ಸಂತ್ರಸರ ಸಂಕಷ್ಟ ಪರಿಹರಿಸುವಲ್ಲಿ ಮುಖ್ಯಮಂತ್ರಿ ವಿಫಲವಾಗಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಕೋಮುವಾದಿ ಪಕ್ಷವೆಂದು ಕರೆಯುತ್ತಾರೆ. ಆದರೆ ತಮ್ಮ ಬೆಂಬಲಿಗರನ್ನು ಮುಂಬೈಗೆ ಕಳುಹಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಈ ಉಪ ಚುನಾವಣೆಗೆ ಅವರೇ ಮುಖ್ಯ ಕಾರಣರಾಗಿದ್ದಾರೆ’ ಎಂದು ಆರೋಪಿಸಿದರು.

‘ಅಥಣಿ ಮತ್ತು ಕಾಗವಾಡ ಮತಕ್ಷೇತ್ರದ ಅನರ್ಹ ಶಾಸಕರಾದ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ದುಡ್ಡು ಪಡೆದು ಬಿಜೆಪಿ ಬೆಂಬಲಿಸಿದ್ದಾರೆ. ಇದು ನನ್ನೊಬ್ಬನ ಆರೋಪವಲ್ಲ. ನಾಡಿನ ಜನರ ಆರೋಪವಾಗಿದೆ’ ಎಂದರು.

ಪಕ್ಷದ ಮುಖಂಡ ಬಿ.ಆರ್. ಪಾಟೀಲ ತಾಲ್ಲೂಕಿನ ಜೆ.ಡಿ.ಎಸ್. ಮುಖಂಡರಿಗೆ ಮೈತ್ರಿ ಸರ್ಕಾರದಲ್ಲಿ ಆದ ಅನ್ಯಾಯದ ಕುರಿತು ಮಾತನಾಡಿದರು. ‘ಜನತಾ ಪರಿವಾರ ಹುಟ್ಟಿದಾಗಿನಿಂದಲೂ ಪಕ್ಷದಲ್ಲಿ ಇದ್ದೇನೆ. ಪಕ್ಷಾಂತರ ಮಾಡಿಲ್ಲ. ಆದರೂ ನನಗೆ ಅನ್ಯಾಯವಾಗಿದೆ. ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಖುದ್ದಾಗಿ ಕಾರ್ಯಕರ್ತರ ಸಮಸ್ಯೆ ಹೇಳಲು ಹೋದರೂ ವರಿಷ್ಠರು ಕೇಳಿಸಿಕೊಳ್ಳಲಿಲ್ಲ’ ಎಂದು ಆರೋಪಿಸಿದರು.

ಮುಖಂಡರಾದ ಶಾಸಕ ಕಲ್ಲಪ್ಪ ಮಗೆನ್ನವರ, ಗಿರೀಶ ಬುಟಾಳೆ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ಹಳ್ಳದಮಳ, ಅಣ್ಣಾರಾಯ ಹಾಲಳ್ಳಿ, ಬಾಗವಾನ, ರಾಜೇಂದ್ರ ಐಹೊಳೆ, ಲಕ್ಕಪ್ಪ ಮೂಡಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.