ADVERTISEMENT

ಅಥಣಿ ಗಚ್ಚಿನಮಠದಲ್ಲಿ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ಸ್ವಾರ್ಥದತ್ತ ಒಲವು: ಸವದಿ ವಿಷಾದ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 11:23 IST
Last Updated 21 ಫೆಬ್ರುವರಿ 2020, 11:23 IST
ಅಥಣಿಯ ಗಚ್ಚಿನ ಮಠದಲ್ಲಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವವನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು
ಅಥಣಿಯ ಗಚ್ಚಿನ ಮಠದಲ್ಲಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವವನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು   

ಅಥಣಿ: ‘ನಮ್ಮಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಇದರಿಂದ ಸ್ವಾರ್ಥದ ಕಡೆಗೆ ಒಲವು ಹೆಚ್ಚಾಗಿದೆ. ಮಾನವೀಯತೆ ದೂರಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಆಚರಣೆ ಅಂಗವಾಗಿ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವ ಮತ್ತು ಜಾಗತಿಕ ಶಾಂತಿ ಹಾಗೂ ಪ್ರಗತಿ ಕುರಿತ ವಿಚಾರಸಂಕಿರಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯನ ಹುಟ್ಟು– ಸಾವಿನ ನಡುವಿರುವ ಬದುಕನ್ನು ವ್ಯರ್ಥ ಮಾಡಿಕೊಳ್ಳಬಾರದು. ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು. ನಾವು ಸತ್ತಾಗ ಅವರಿನ್ನೂ ಬದುಕಬೇಕಾಗಿತ್ತು ಎಂದು ಜನ ಮಾತನಾಡಿಕೊಳ್ಳುವಂತೆ ಜೀವನ ನಡೆಸಬೇಕು. ಮತ್ತೊಬ್ಬರಿಗೆ ನೋವು ಕೊಡುವ ಕೆಲಸದಲ್ಲಿ ತೊಡಗಬಾರದು. ಸಾಧ್ಯವಾದಷ್ಟು ಕಣ್ಣೀರು ಒರೆಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಂಸ್ಕಾರ ಅಳವಡಿಡಿಕೊಂಡು ನಮ್ಮ ಸಂಸ್ಕೃತಿ ಉಳಿಸಬೇಕು. ಆ ಮೂಲಕ ಎಲ್ಲರ ಮನ ಗೆಲ್ಲಬೇಕು’ ಎಂದರು.

‘ಇತಿಹಾಸ ಓದಿಕೊಳ್ಳಬೇಕು. ಅಮರರಾದ ಪುಣ್ಯ ಪುರುಷರ ಚರಿತ್ರೆ ತಿಳಿದುಕೊಳ್ಳಬೇಕು. ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು’ ಎಂದು ಹೇಳಿದರು.

ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಜಾಗತಿಕವಾಗಿ ಸಮಾಜವು ಹಿಂಸೆಯತ್ತ ವಾಲುತ್ತಿದೆ. ದಬ್ಬಾಳಿಕೆ, ದೌರ್ಜನ್ಯ ಹೆಚ್ಚಿನ ಆಕರ್ಷಣೆ ಕೊಡುತ್ತಿದೆ. ಪರರ ಮುಂದೆ ನಾವು ಸಭ್ಯರಂತೆ ವರ್ತಿಸುತ್ತಿದ್ದೇವೆ. ಆದರೆ, ಏಕಾಂತದಲ್ಲಿ ನಾವು ಸಭ್ಯರೇ ಎನುವುದ್ನನ್ನು ಅರಿತುಕೊಳ್ಳಬೇಕು. ಅಂತರಾಳಕ್ಕೆ ಶಾಂತಿ, ನೆಮ್ಮದಿ ಬೇಕಾಗಿದೆ. ಅದನ್ನು ನಾವು ಕಷ್ಟಪಟ್ಟು ಸಂಪಾದಿಸುವ ಪರಿಸ್ಥಿತಿ ಬಂದಿದೆ’ ಎಂದರು.

‘ಶಾಂತಿಯ ಮೂಲವೇ ಶಿವಯೋಗವಾಗಿದೆ. ಮುರುಘೇಂದ್ರ ಶಿವಯೋಗಿಗಳು ಶಾಂತಿ ಪ್ರಿಯರು ಹಾಗೂ ಶಾಂತಿದೂತರು. ಇಂತಹ ಶರಣರ ಸಂದೇಶಗಳ ಸಾರವನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಭಾವಕ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಹಾಗೂ ಶಾಂತಿ ದೊರೆಯುತ್ತದೆ’ ಎಂದು ತಿಳಿಸಿದರು.

ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಶಿವಾನಂದ ನಾಯ್ಕ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಮುಖಂಡರಾದ ರಮೇಶ ಸಿದಂಗಿ, ಡಾ.ಇಸೆಬೆಲ್ಲಾ ಝೇವಿಯರ್, ಬಸವರಾಜ ಕೆರೋಡಿ, ಮುರುಘೇಶ ಚನ್ನಣ್ಣವರ ಇದ್ದರು.

ಶಿವು ದಿವಾನಮಳ ಸ್ವಾಗತಿಸಿದರು. ಬಸವರಾಜ ಕೆರೋಡಿ ನಿರೂಪಿಸಿದರು. ಸಾಹಿತಿ ವಾಮನ್ ಕುಲಕರ್ಣಿ ವಂದಿಸಿದರು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.