ಬೆಳಗಾವಿ: ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು, ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದವರು ಬುಧವಾರ ಸಂಭ್ರಮಾಚರಣೆ ಮಾಡಿದರು.
ಭಾರತೀಯ ಸೇನೆ ಪರ ಘೋಷಣೆ ಕೂಗಿದ ಮಾಜಿ ಸೈನಿಕರು, ರಾಷ್ಟ್ರಧ್ವಜ ಹಿಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
‘ಪಾಕಿಸ್ತಾನದ ಮೇಲೆ ಇಂಥದ್ದೊಂದು ದಾಳಿ ನಡೆಯಬೇಕಿತ್ತು. ಈಗಲೇ ನೀವು ಪಾಠ ಕಲಿಯದಿದ್ದರೆ ಹೆಚ್ಚಿನ ಪ್ರತ್ಯುತ್ತರ ಕೊಡಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಅಧ್ಯಕ್ಷ ಜಗದೀಶ ಪೂಜೇರಿ, ‘ದೇಶದಲ್ಲಿ ಯುದ್ಧಕ್ಕೆ ಕರೆ ಬಂದರೆ ಹೋಗಲು ನಾವೆಲ್ಲ ಸಿದ್ಧರಿದ್ದೇವೆ. ಈಗ ಗಡಿಯಲ್ಲಿ ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರ ಕುಟುಂಬಕ್ಕೆ ನೆರವಾಗುತ್ತೇವೆ’ ಎಂದರು.
ರಮೇಶ ಚೌಗಲಾ, ಶಿವಬಸಪ್ಪ ಕಾಡನ್ನವರ, ಸಂತೋಷ ಮಠಪತಿ, ಅಶೋಕ ಮಜ್ಜಗಿ, ಸಂತೋಷ ಹಿರೇಮಠ, ಸುನಿತಾ ಪಟ್ಟಣಶೆಟ್ಟಿ ಇತರರಿದ್ದರು.
ಸಂಭಾಜಿ ವೃತ್ತದಲ್ಲೂ ಸಂಭ್ರಮಾಚರಣೆ: ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದ್ದನ್ನು ಸ್ವಾಗತಿಸಿ, ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸ್ವರಾಜ್ಯ ಯುವದಳ ಹಾಗೂ ಬಿಲೀವ್ ಫೌಂಡೇಷನ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಸಂಭಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಕಾರ್ಯಕರ್ತರು, ಪಟಾಕಿ ಸಿಡಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ಖುಷಿಪಟ್ಟರು. ‘ಭಾರತ್ ಮಾತಾಕಿ ಜೈ’ ಎಂದು ಜೈಕಾರ ಕೂಗಿದರು. ಸೌರಭ ಸಾವಂತ, ಸಾಯಿರಾಮ ಜಹಗೀರದಾರ, ಸ್ನೇಹಿತ ಶೆಟ್ಟಿ, ವರದರಾಜ ನೇತೃತ್ವ ವಹಿಸಿದ್ದರು.
ವಿಶೇಷ ಪೂಜೆ:
ಪಾಕಿಸ್ತಾನದ ಭಯೋತ್ಪಾದಕರ ಅಡಗುದಾಣಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ರಾಣಿ ಚನ್ನಮ್ಮನ ವೃತ್ತ ಬಳಿ ಇರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭಾರತೀಯ ಸೇನೆಗೆ ಜೈಕಾರ ಹಾಕಿದರು. ‘ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿ, ಹಿಂದೂ ಧರ್ಮಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ, ಮುಖಂಡರಾದ ಗಂಗಾಧರ ಪಾಟೀಲ, ಚಿನ್ಮಯ ಪಂಚನ್ನವರ, ಬಸವರಾಜ ದೊಡಮನಿ ನೇತೃತ್ವ ವಹಿಸಿದ್ದರು.
ಮೋದಿ ನಡೆ ಶ್ಲಾಘನೀಯ
ಪಾಕಿಸ್ತಾನದ ಉಗ್ರರ ತಾಣಗಳಲ್ಲಿ ಏರ್‌ಸ್ಟ್ರೈಕ್ ಮಾಡುವ ಮೂಲಕ ಉಗ್ರರಿಗೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಸೈನ್ಯ ಮತ್ತು ನಾಗರಿಕ ಪ್ರದೇಶಗಳಿಗೆ ಹಾನಿ ಮಾಡದೆ ‘ಆಪರೇಷನ್ ಸಿಂಧೂರ್’ ಮೂಲಕ ಪ್ರತ್ಯುತ್ತರ ನೀಡಿ ಪ್ರತಿಕಾರ ತೀರಿಸಿಕೊಂಡಿದೆ. ಉಗ್ರ ಸಂಘಟನೆ ಹಾಗೂ ಅವುಗಳಿಗೆ ನೆಲೆಯಾಗಿರುವ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ದೊರೆತಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ‘ನಾವು ಶಾಂತಿ ಬಯಸುತ್ತೇವೆ. ಆದರೆ ದುಷ್ಟತನದ ಮುಂದೆ ಮೌನವಾಗಿರಲು ಸಾಧ್ಯವಿಲ್ಲ. ದೇಶದ ಹಿರಿಮೆ ಎತ್ತಿಹಿಡಿದ ಸೈನಿಕರಿಗೆ ನಮ್ಮ ಸಲಾಂ ಇದೆ. ಉಗ್ರರ 9 ನೆಲೆಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂತಹ ಕಾರ್ಯಾಚರಣೆ ನಡೆದಿರುವುದು ಅವರ ಸಮರ್ಥ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಸೈನ್ಯಕ್ಕೆ ಅವರು ನೀಡಿದ ಸ್ವಾತಂತ್ರ್ಯ ಬೆಂಬಲ ನಂಬಿಕೆ ಶ್ಲಾಘನೀಯ. ಮೋದಿ ಅವರನ್ನು ಹೊರತುಪಡಿಸಿ ಇನ್ನಾರಿಗೂ ಈ ಕಾರ್ಯ ಮಾಡಲು ಆಗುತ್ತಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.