ADVERTISEMENT

ಆಯುರ್ವೇದ ಬೋಧಕರಿಗೆ ಇಲ್ಲ ಕನಿಷ್ಠ ವೇತನ: ರಾಜ್ಯದಲ್ಲಿವೆ 106 ಕಾಲೇಜುಗಳು

5,000ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ

ಸಂತೋಷ ಈ.ಚಿನಗುಡಿ
ರವಿ ಎಂ.ಹುಲಕುಂದ
Published 10 ಡಿಸೆಂಬರ್ 2024, 3:15 IST
Last Updated 10 ಡಿಸೆಂಬರ್ 2024, 3:15 IST
ಮೈಸೂರಿನಲ್ಲಿರುವ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ
ಮೈಸೂರಿನಲ್ಲಿರುವ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ   

ಬೆಳಗಾವಿ: ರಾಜ್ಯದ ಬಹುತೇಕ ಆಯುರ್ವೇದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಿಗೆ ನಿಗದಿತ ವೇತನ ಸಿಗುತ್ತಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಗೆಜೆಟ್‌ ಅಧಿಸೂಚನೆಯನ್ನೂ ಕಾಲೇಜುಗಳು ಪಾಲಿಸುತ್ತಿಲ್ಲ.

ರಾಜ್ಯದಲ್ಲಿ 100 ಖಾಸಗಿ ಆಯುರ್ವೇದ ಕಾಲೇಜುಗಳಿವೆ. 4 ಆಯುರ್ವೇದ ಮತ್ತು 2 ಯುನಾನಿ ಸೇರಿ 6 ಸರ್ಕಾರಿ ಕಾಲೇಜುಗಳಿವೆ. ‘ಸಮರ್ಪಕ ವೇತನಕ್ಕಾಗಿ ಬೋಧಕ ಸಿಬ್ಬಂದಿ ಪರದಾಡುವಂತಾಗಿದೆ’ ಎಂಬುದು ಆಯುರ್ವೇದ ಟೀಚರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಸಂಗಮೇಶ ಸ್ವಾಮಿ ಹಿರೇಮಠ ಅವರ ದೂರು.

ಕೇಂದ್ರ ಸರ್ಕಾರ 2020ರಲ್ಲಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಇದರ ಪ್ರಕಾರ, ಭಾರತೀಯ ಚಿಕಿತ್ಸಾ ಪದ್ಧತಿಗಳ ರಾಷ್ಟ್ರೀಯ ಆಯೋಗದ ಮಾನ್ಯತೆ ಪಡೆದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರಿಗೆ ₹1.23 ಲಕ್ಷದಿಂದ ₹2.16 ಲಕ್ಷ, ಸಹಪ್ರಾಧ್ಯಾಪಕರಿಗೆ ₹79 ಸಾವಿರದಿಂದ ₹2.09 ಲಕ್ಷ ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ₹56 ಸಾವಿರದಿಂದ ₹1.77 ಲಕ್ಷ ವೇತನ ನೀಡಬೇಕು.

ADVERTISEMENT

ಸದ್ಯ 7ನೇ ವೇತನ ಆಯೋಗಕ್ಕೆ ತಕ್ಕಂತೆ ಈ ಸಂಬಳವೂ ಪರಿಷ್ಕರಣೆ ಆಗಬೇಕಿದೆ.

ರಾಜ್ಯ ಕಾರ್ಮಿಕ ಇಲಾಖೆ ಕೂಡ ಆಯುರ್ವೇದ ಪದವೀಧರ ಉಪನ್ಯಾಸಕರಿಗೆ (ಹೊರಗುತ್ತಿಗೆ) ಕನಿಷ್ಠ ಸಂಬಳ ₹46,894 ನೀಡಬೇಕೆಂದು ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ಉಪನ್ಯಾಸಕರು ಸ್ನಾತಕೋತ್ತರ ಪದವಿ ಪಡೆದಿದ್ದರೆ ಇದಕ್ಕೂ ಹೆಚ್ಚು ನೀಡಬೇಕು. ಆದರೆ, ಎಲ್ಲ ಸರ್ಕಾರಿ ಕಾಲೇಜುಗಳಲ್ಲೂ ಹೊರಗುತ್ತಿಗೆ ಉಪನ್ಯಾಸಕರಿಗೆ ಕೇವಲ ₹40 ಸಾವಿರ ಸಂಬಳ ನೀಡಲಾಗುತ್ತಿದೆ. ಸರ್ಕಾರವೇ ಮಾಡಿದ ನಿಯಮವನ್ನು ಸರ್ಕಾರಿ ಕಾಲೇಜುಗಳಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪವಿದೆ.

ಪ್ರವೇಶ ಶುಲ್ಕದಲ್ಲೂ ಅನ್ಯಾಯ: ಖಾಸಗಿ ಆಯುರ್ವೇದ ಶಿಕ್ಷಣ ಸಂಸ್ಥೆಗಳ ಪ್ರವೇಶ ಶುಲ್ಕವನ್ನು ಆರೋಗ್ಯ ಇಲಾಖೆಯ ‘ಶುಲ್ಕ ನಿಯಂತ್ರಣ ಸಮಿತಿ’ ನಿಗದಿಪಡಿಸುತ್ತದೆ. ನಿಗದಿ ಮಾಡುವಾಗ ಬೋಧಕರ ಸಂಘಟನೆಗಳನ್ನು ಪರಾಮರ್ಶೆಗೆ ಕರೆಯಬೇಕು ಎಂಬ ನಿಯಮವನ್ನೂ ಗಾಳಿಗೆ ತೂರಲಾಗುತ್ತಿದೆ. ಇದರಿಂದ ಖಾಸಗಿ ಆಯುರ್ವೇದ ಕಾಲೇಜುಗಳು ಹೆಚ್ಚು ಶುಲ್ಕ ಪಡೆದರೂ ಸೂಕ್ತ ವೇತನ ನೀಡುತ್ತಿಲ್ಲ.

ಈಗಲಾದರೂ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಬೇಕು ಎಂಬುದು ಅಸೋಸಿಯೇಷನ್‌ ಕೂಗು.

ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಷ್ಯವೇತನಕ್ಕಿಂತಲೂ ಉಪನ್ಯಾಸಕರ ಸಂಬಳ ಕಡಿಮೆ ಇದೆ. ಸರ್ಕಾರ ಇದನ್ನು ಗಮನಿಸಬೇಕು
ಡಾ.ಸಂಗಮೇಶ ಸ್ವಾಮಿ ಹಿರೇಮಠ ಅಧ್ಯಕ್ಷ ಆಯುರ್ವೇದ ಟೀಚರ್ಸ್‌ ಅಸೋಸಿಯೇಷನ್‌

ಹುದ್ದೆಗಳಿಗೂ ಕತ್ತರಿ

ಸರ್ಕಾರಿ ಆಯುರ್ವೇದ ಕಾಲೇಜುಗಳಲ್ಲಿ ಬೋಧಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ 2024–25ನೇ ಸಾಲಿನಲ್ಲಿ ಬೋಧಕರ 55 ಹುದ್ದೆಗಳನ್ನು ಕಡಿಮೆ ಮಾಡಲಾಗಿದೆ. ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿದ್ದ 100 ಸೀಟುಗನ್ನು 90ಕ್ಕೆ ಕಡಿತ ಮಾಡಲಾಗಿದೆ. ಬಳ್ಳಾರಿಯ ತಾರಾನಾಥ್ ಕಾಲೇಜಿನಲ್ಲಿ ಹುದ್ದೆಗಳನ್ನು 60ರಿಂದ 47ಕ್ಕೆ ಶಿವಮೊಗ್ಗ ಸರ್ಕಾರಿ ಕಾಲೇಜಿನ ಹುದ್ದೆಗಳನ್ನು 60ರಿಂದ 33ಕ್ಕೆ ಮೈಸೂರು ಸರ್ಕಾರಿ ಕಾಲೇಜಿನಲ್ಲಿ 100ರಿಂದ 95ಕ್ಕೆ ಕಡಿತ ಮಾಡಲಾಗಿದೆ. ಬೆಂಗಳೂರಿನ ಸರ್ಕಾರಿ ಯುನಾನಿ ಆಯುರ್ವೇದ ಕಾಲೇಜಿನಲ್ಲಂತೂ 75 ಹುದ್ದೆಗಳನ್ನು ಕೇವಲ 13ಕ್ಕೆ ಸೀಮಿತಗೊಳಿಸಲಾಗಿದೆ. ಅಭ್ಯರ್ಥಿಗಳು ಬಾರದ ಕಾರಣ ನೀಡಿ ‘ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್’ ಈ ಆದೇಶ ಹೊರಡಿಸಿದೆ. ಪರೋಕ್ಷವಾಗಿ ಇದು ಬಡ ವಿದ್ಯಾರ್ಥಿಗಳ ಮೇಲೆಯೇ ಪೆಟ್ಟು ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.