ಬೈಲಹೊಂಗಲ: ನೀನೇ ರಾಮ, ನೀನೇ ಶಾಮ, ನೀನೇ ಅಲ್ಲಾಹು, ನೀನೇ ಯೇಸು... ಹಾಡು ಮೊಳಗಿಸಿದ ತಾಲ್ಲೂಕಿನ ಸಂಪಗಾಂವ ಗ್ರಾಮದ ಹಿಂದೂ, ಮುಸ್ಲಿಮರು ಒಟ್ಟಾಗಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆಯ ಸಂದೇಶ ಸಾರಿದರು.
ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ 17 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮೇಲೆ 3 ಕ್ವಿಂಟಲ್ ಪುಷ್ಪಾರ್ಚನೆ ಮಾಡಿ ಶನಿವಾರ ತಡರಾತ್ರಿ ಗಣೇಶ ಮೂರ್ತಿಗಳಿಗೆ ಭಕ್ತಿಪೂರ್ವಕ ವಿದಾಯ ಹೇಳಿದರು.
ಜಂಟಿಯಾಗಿ ಗಣೇಶನನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿದ ಗ್ರಾಮದ ಹಿಂದೂ, ಮುಸ್ಲಿಮ ಸಮಾಜದವರು 11 ದಿನ ಗಣಪತಿ ಆರಾಧನೆ ಮಾಡಿದರು. ವಿಸರ್ಜನಾ ಮೆರವಣಿಗೆಯಲ್ಲಿ ಗ್ರಾಮದ ಸಣ್ಣ ಮಸೀದಿ ಎದುರು ಗಣೇಶ ಮೂರ್ತಿಗಳನ್ನು ಬರಮಾಡಿಕೊಂಡು ಏಕಕಾಲಕ್ಕೆ ಪೂಜೆ ಮಾಡಿ ಭಕ್ತಿಭಾವ ಸಮರ್ಪಿಸಿದರು.
ಡಿಜೆ ಸಾಂಗಿಗೆ ಮುಸ್ಲಿಮರ ಹೆಜ್ಜೆ:
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಹಿಂದೂ, ಮುಸ್ಲಿಮರು ಸೇರಿ ಗಣಪತಿ ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಕೊರಳಿಗೆ ಕೇಸರಿ ಶಾಲೂ, ತಲೆ ಮೇಲೆ ಕೆಸರಿ ಟೊಪ್ಪಿ ಹಾಕಿಕೊಂಡು ಗಣೇಶನ ಮೂರ್ತಿಗಳಿಗೆ ಹೂವು ಮಾಲೆ ಹಾಕಿ ಪೂಜೆ ಮಾಡಿ ನಮಿಸಿದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ತಿಗಡಿ ಗ್ರಾಮದ ಹರಿನಾಲಾ ಡ್ಯಾಮಿನಲ್ಲಿ 17 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರು.
ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅನೀಲದೇವ ನೇಸರಗಿ, ಸದಸ್ಯ ಮಂಜುನಾಥ ಶಿಡ್ಲೇವಗೋಳ, ಕರ್ನಾಟಕ ನವ ನಿರ್ಮಾಣ ಪಡೆ ಅಧ್ಯಕ್ಷ ಮಂಜುನಾಥ ಉಳವಿ, ಮುಸ್ಲಿಮ ಸಮಾಜ ಮುಖಂಡರಾದ ಮಲ್ಲಿಕ್ ಇರಾನಿ, ದಾದಾಪೀರ ಮತ್ತಿಕೊಪ್ಲ, ಸರ್ದಾರ ಕಾದ್ರೊಳ್ಳಿ, ದಾದಾ ಅಪ್ಪುಗೋಳ, ಇರ್ಷಾದ ಅತ್ತಾರ, ಆಸೀಪ ಕಿತ್ತೂರ, ಗುಡುಸಾಬ ಕಾದ್ರೊಳ್ಳಿ, ನಾಗಯ್ಯ ಸಾಲಿಮಠ, ಬಸವರಾಜ ಕೋನಿನವರ, ಶ್ರೀಕಾಂತ ಕೋಟಗಿ, ರವಿಕುಮಾರ ಎಂ.ಹುಲಕುಂದ ಇದ್ದರು.
‘ಹಿಂದೂ ಮುಸ್ಲಿಮರು ಒಟ್ಟಿಗೆ ಗಣೇಶೋತ್ಸವ ಆಚರಿಸಿಕೊಂಡು ಬಂದಿದ್ದೇವೆ. ಒಟ್ಟಿಗೆ ಪೂಜೆ ಮಾಡಿ ಅನ್ನಸಂತರ್ಪಣೆ ಮಾಡುತ್ತೇವೆ. ಗಣೇಶನ ಹಬ್ಬ ಸೌಹಾರ್ದತೆಯ ಸಂಕೇತವಾಗಿದೆ’ ಎಂದು ಮುಸ್ಲಿಮ ಸಮಾಜ ಮುಖಂಡ ಮಲ್ಲಿಕ್ ಇರಾನಿ ತಿಳಿಸಿದರು.
‘ಗಣಪತಿ ಪ್ರತಿಷ್ಠಾಪನೆಯಲ್ಲಿ ಸಿಹಿ ಹಂಚುತ್ತೇವೆ. ನಾವೆಲ್ಲರೂ ಒಟ್ಟಾಗಿದ್ದೇವೆ. ನಮ್ಮೂರಿನ ಗಣೇಶೋತ್ಸವ ಮಾದರಿ ಆಗಿ’ ಎಂದು ಗ್ರಾಮದ ಮುಖಂಡ ಮಂಜುನಾಥ ಉಳವಿ ತಿಳಿಸಿದರು.
*ಕೆಸರಿ ಶಾಲೂ, ಟೊಪ್ಪಿ ಧರಿಸಿ ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಮರು *ಗಣೇಶ ಮೂರ್ತಿಗಳ ಮೇಲೆ 3 ಕ್ವಿಂಟಾಲ ಪುಷ್ಪಾರ್ಚನೆ *ಗಣೇಶ ಮೂರ್ತಿಗಳಿಗೆ ಮಸೀದಿ ಎದುರು ಪೂಜೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.