ADVERTISEMENT

ಉಪ ಚುನಾವಣೆಗೆ ಸಿದ್ಧವಾಗಿ

ಬಿಜೆಪಿ ಕಾರ್ಯಕರ್ತರಿಗೆ ಬಾಲಚಂದ್ರ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:00 IST
Last Updated 19 ಅಕ್ಟೋಬರ್ 2020, 16:00 IST
ಗೋಕಾಕದಲ್ಲಿ ಸೋಮವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು
ಗೋಕಾಕದಲ್ಲಿ ಸೋಮವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು   

ಗೋಕಾಕ: ‘ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು. ಬಿಜೆಪಿ ಅಭ್ಯರ್ಥಿ ಜಯಶಾಲಿಯನ್ನಾಗಿ ಮಾಡುವ ಮೂಲಕ ದಿ.ಸುರೇಶ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿ ನೀಡಬೇಕು’ ಎಂದು ಅರಬಾವಿ ಶಾಸಕರೂ ಆಗಿರುವ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಹೊರವಲಯದ ಗೋಕಾಕ ಸಪ್ಲೈಯರ್‌ ಸಭಾಭವನದಲ್ಲಿ ಸೋಮವಾರ ನಡೆದ ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಅಗಲಿರುವುದು ನಮಗೆಲ್ಲ ಅಪಾರ ನೋವನ್ನುಂಟು ಮಾಡಿದೆ. ಸರಳ, ಸಜ್ಜನ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ ಅವರು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದರು. ನನಗೆ ಒಳ್ಳೆಯ ಸ್ನೇಹಿತರಾಗಿದ್ದರು’ ಎಂದು ನೆನೆದರು.

ADVERTISEMENT

‘ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಕಾರ್ಯಕರ್ತರಿಗಿರುವ ಗೌರವ ಯಾವ ಪಕ್ಷದಲ್ಲೂ ದೊರೆಯುವುದು ಅಸಾಧ್ಯ. ಜವಾಬ್ದಾರಿ ವಹಿಸಿಕೊಂಡಿರುವ ಹೊಸ ಪದಾಧಿಕಾರಿಗಳು ಸಂಘಟನಾತ್ಮಕವಾಗಿ ಶ್ರಮಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರ ಮುಂದಿಡಬೇಕು’ ಎಂದು ತಿಳಿಸಿದರು.

‘ಅರಭಾವಿ ಮತಕ್ಷೇತ್ರದಲ್ಲಿ ನಾನು ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿಕೊಂಡು ಅಭಿವೃದ್ಧಿ ಮಾಡುತ್ತೇವೆ. ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷದ ಎಲ್ಲ ನಾಯಕರೂ ಸೇರಿ ದುಡಿಯುತ್ತೇವೆ. ಎಂಎಲ್‌ಸಿ ಆಕಾಂಕ್ಷಿಯಾಗಿದ್ದ ಕಡಾಡಿ ಅವರಿಗೆ ಕಲ್ಲೋಳಿ ಹನಮಂತ ದೇವರ ಆಶೀರ್ವಾದದಿಂದ ರಾಜ್ಯಸಭಾ ಸದಸ್ಯತ್ವ ದೊರೆತಿರುವುದು ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದರು.

ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ, ‘ಬಿಜೆಪಿ ತತ್ವಾಧಾರಿತ ಪಕ್ಷವಷ್ಟೆ ಅಲ್ಲ. ಮತದಾರರಿಗೂ ಗೌರವ ನೀಡುವ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತ ಪಕ್ಷದ ಅಧ್ಯಕ್ಷನಾಗಬಹುದು ಎನ್ನುವುದಕ್ಕೆ ಜಯಪ್ರಕಾಶ ನಡ್ಡಾ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿರುವುದು ಉದಾಹರಣೆಯಾಗಿದೆ’ ಎಂದು ತಿಳಿಸಿದರು.

ಹೊಸದಾಗಿ ನೇಮಕವಾದ ವಿವಿಧ ಮೋರ್ಚಾಗಳ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋವಿಂದ ಕೊಪ್ಪದ ಮತ್ತು ವಾಸಂತಿ ತೇರದಾಳ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಒಬಿಸಿ ಅಧ್ಯಕ್ಷ ಬಸವರಾಜ ಮಾಳೇದವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.