ADVERTISEMENT

ಕಿತ್ತೂರು ನೆಲದೊಂದಿಗೆ ಬಸವಲಿಂಗಯ್ಯ ಹಿರೇಮಠ ನಿಕಟ ಸಂಪರ್ಕ

ಗ್ರಾಮೀಣ ಕಲಾವಿದರನ್ನು ಪರಿಚಯಿಸಿದ್ದ ಹಿರೇಮಠ

ಪ್ರದೀಪ ಮೇಲಿನಮನಿ
Published 9 ಜನವರಿ 2022, 10:43 IST
Last Updated 9 ಜನವರಿ 2022, 10:43 IST
ಕಿತ್ತೂರು ಕಲ್ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯನ ಪ್ರಸ್ತುತಪಡಿಸಿದ್ದ ಬಸವಲಿಂಗಯ್ಯ ಹಿರೇಮಠ ದಂಪತಿ (ಸಂಗ್ರಹ ಚಿತ್ರ)
ಕಿತ್ತೂರು ಕಲ್ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯನ ಪ್ರಸ್ತುತಪಡಿಸಿದ್ದ ಬಸವಲಿಂಗಯ್ಯ ಹಿರೇಮಠ ದಂಪತಿ (ಸಂಗ್ರಹ ಚಿತ್ರ)   

ಚನ್ನಮ್ಮನ ಕಿತ್ತೂರು: ‘ಹುಲಿಯು ಹುಟ್ಟಿತ್ತು ಕಿತ್ತೂರು ನಾಡಾಗ, ಸಂಗೊಳ್ಳಿ ಊರಾಗ’, ‘ಬಿತ್ತರದಲ್ಲಿ ಭೋರೆನ್ನೆತ್ತಿದೆ ಕಿತ್ತೂರಿನ ಹೊಳೆ ಹುಚ್ಚು’... ಎಂಬಿತ್ಯಾದಿ ಜನಪ್ರಿಯ ಹಾಡುಗಳ ಮೂಲಕ ಗಮನಸೆಳೆದಿದ್ದ ಕಂಚಿನ ಕಂಠದ ಗಾಯಕರೂ ಆಗಿದ್ದ ಬಸವಲಿಂಗಯ್ಯ ಹಿರೇಮಠ ನಾಡಿನ ಉದ್ದಗಲಕ್ಕೂ ಪರಿಚರಾಗಿದ್ದರು.

ಜಾನಪದ ವಿದ್ವಾಂಸರೂ ಆಗಿದ್ದ ಅವರು ಧಾರವಾಡದಲ್ಲಿ ನೆಲೆಸಿದ್ದರೂ, ತವರು ಗ್ರಾಮ ಬೈಲೂರು ಹಾಗೂ ಕಿತ್ತೂರಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹಲವು ಕಾರ್ಯಕ್ರಮಗಳನ್ನು ಅವರು ನೀಡಿದ್ದರು. ತವರಿನ ಜಾನಪದ ಹಾಗೂ ಸಂಗೀತ ರಸಿಕರನ್ನು ರಂಜಿಸಿದ್ದರು.

‘ಕಿತ್ತೂರಲ್ಲಿಯೇ ತಮ್ಮ ಪಿಯು ಕಾಲೇಜು ಶಿಕ್ಷಣ ಪೂರೈಸಿದ್ದರು. ಕಲಾವಿದೆ, ರಂಗ ನಿರ್ದೇಶಕಿ ಕಿತ್ತೂರಿನ ವಿಶ್ವೇಶ್ವರಿ ಹಿರೇಮಠ ಅವರನ್ನು ಬಾಳಸಂಗಾತಿಯನ್ನಾಗಿ ಆರಿಸಿಕೊಂಡು ಕಲಾ ರಂಗದಲ್ಲಿ ಸಹಪ್ರಯಾಣಿಕರಾಗಿ ಸಾಗಿ ಇಬ್ಬರೂ ದೊಡ್ಡ ಎತ್ತರಕ್ಕೇರಿದರು. ಕಲಾಬಂಡಿಯ ಒಂದು ಚಕ್ರವೀಗ ಕಳಚಿದ್ದು ನಾಡಿಗೆ ದೊಡ್ಡ ಹಾನಿ’ ಎಂದು ಇಲ್ಲಿಯ ಜನರು ಸ್ಮರಿಸುತ್ತಾರೆ.

ADVERTISEMENT

‘ರಂಗ ನಿರ್ದೇಶಕ ಜಯತೀರ್ಥ ಜೋಶಿ ಅವರು 80ರ ದಶಕದಲ್ಲಿ ಕಿತ್ತೂರಲ್ಲಿ ಕಲಾಶಿಬಿರ ಏರ್ಪಡಿಸಿ ಇಲ್ಲಿಯ ಹವ್ಯಾಸಿ ಕಲಾವಿದರನ್ನು ಒಂದುಗೂಡಿಸಿ ‘ಧರ್ಮಪುರಿಯ ಶ್ವೇತ ವೃತ್ತ’ ನಾಟಕ ಪ್ರದರ್ಶನ ಮಾಡಿದ್ದರು. ಆ ನಾಟಕದಲ್ಲಿ ಬಸವಲಿಂಗಯ್ಯ ಅವರ ಹಾಡೇ ನಾಟಕದ ಜೀವಾಳವಾಗಿತ್ತು. ಈ ನಾಟಕ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರದರ್ಶನಗೊಂಡಿತು. ಅವರ ಕಂಚಿನ ಕಂಠವೂ ನಾಡಿನಾದ್ಯಂತ ಚಿರಪರಿಚಿತವಾಯಿತು’ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಎನ್.ಎಸ್. ಗಲಗಲಿ ಸ್ಮರಿಸುತ್ತಾರೆ.

‘ಮುಂದೆ ನೀನಾಸಂ ಸೇರಿದರು. ಅನಂತರ ಹಿಂದಿರುಗಿ ನೋಡಲಿಲ್ಲ. ಬಹಳ ಮುಂದೆ ಸಾಗಿ ಎತ್ತರಕ್ಕೆ ಅವರು ಬೆಳೆದರು. ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶನ ನೀಡಿ ಕಲಾಸಕ್ತರ ಗಮನಸೆಳೆದರು’ ಎಂದರು.

‘ರಾತ್ರಿಯಿಡೀ ಕುಳಿತು ನೋಡಬೇಕಿದ್ದ ಶ್ರೀಕೃಷ್ಣ ಪಾರಿಜಾತ ನಾಟಕ ಪರಿಷ್ಕರಿಸಿ ಸುಮಾರು ಎರಡೂವರೆ ಗಂಟೆಗೆ ಪ್ರದರ್ಶನ ಇಳಿಸಿದ್ದರು. ನಗರ ಪ್ರದೇಶದ ಜನರೂ ಇದನ್ನು ವೀಕ್ಷಿಸುವಂತಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲೂ ಪಾರಿಜಾತ ಪರಿಮಳ ಪಸರಿಸುವಂತಾಯಿತು’ ಎಂದು ಸ್ಮರಿಸಿದರು.

‘ಗುಡಿಗಳ ಪಡಸಾಲೆಯಲ್ಲಿ ಕುಳಿತು ಭಜನೆ ಪದಗಳನ್ನು ಹಾಡುತ್ತಿದ್ದ ಬಸವಲಿಂಗಯ್ಯ ನಾಡಿನ ಉದ್ದಗಲಕ್ಕೂ ಬೆಳೆದದ್ದು ಅಚ್ಚರಿ ಮೂಡಿಸುವಂತಿದೆ’ ಎನ್ನುತ್ತಾರೆ ಗ್ರಾಮದ ಸಂಜೀವ ಜಕ್ಕಪ್ಪನವರ.

‘ಜಾನಪದ ಸಂಶೋಧನೆ ಕೇಂದ್ರ ಕಿತ್ತೂರಲ್ಲಿ ಸ್ಥಾಪಿಸಿ ಸಣ್ಣಾಟ, ಉತ್ತರ ಕರ್ನಾಟಕದ ಸೋಗುಗಳು ಸೇರಿ ಅನೇಕ ಉತ್ಸವಗಳನ್ನು ಸಂಘಟಿಸಿದ್ದರು. ಅನೇಕ ವಿದ್ವಾಂಸರನ್ನು ಕರೆಸಿ ಉಪನ್ಯಾಸ ಏರ್ಪಡಿಸಿದ್ದರು. ಗ್ರಾಮೀಣ ಪ್ರದೇಶದ ತೆರೆಮರೆಯ ಕಲಾವಿದರನ್ನು ಈ ಉತ್ಸವಗಳ ಮೂಲಕ ನಾಡಿಗೆ ಪರಿಚಯಿಸಿದ್ದು ಅವರ ಹಿರಿಮೆಯಾಗಿದೆ’ ಎಂದು ಅವರು ಬಣ್ಣಿಸಿದರು.

‘ಮರು ಜೀವ ನೀಡಲು ತುಡಿಯುತ್ತಿದ್ದರು’

ಬೆಳಗಾವಿ: ಹೆಸರಾಂತ ಜಾನಪದ ಗಾಯಕ, ಜಾನಪದ ರಂಗಭೂಮಿಯ ತಜ್ಞ ಬಸವಲಿಂಗಯ್ಯ ಹಿರೇಮಠ
ಸಣ್ಣಾಟಗಳಾದ ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ ಪ್ರಕಾರಗಳಿಗೆ ಮರುಜೀವ ನೀಡಲು ತುಡಿಯುತ್ತಿದ್ದರು ಎಂದು ನಾಟಕಕಾರ ಡಿ.ಎಸ್. ಚೌಗಲೆ ಸ್ಮರಿಸಿದ್ದಾರೆ.

‘ಮೂರು ಸಾವಿರಕ್ಕೂ ಅಧಿಕ ಜಾನಪದ, ತತ್ವಪದಗಳನ್ನು ಸ್ಮೃತಿಯಲ್ಲಿಟ್ಟುಕೊಂಡು ಪ್ರಸ್ತುತಪಡಿಸುತ್ತಿದ್ದರು. ಕಲಾವಿದೆ, ಮಡದಿ ವಿಶ್ವೇಶ್ವರಿ ಜೊತೆಗೆ ಸಾವಿರಾರು ಕಾರ್ಯಕ್ರಮಗಳನ್ನು ದೇಶ– ವಿದೇಶಗಳಲ್ಲಿ ನೀಡಿರುವ ಬಹು ದೊಡ್ಡ ಪ್ರತಿಭಾವಂತ ಕಲಾವಿದರು. ನನ್ನ ‘ದಿಶಾಂತರ’ ಮತ್ತು ‘ವಖಾರಿಧೂಸ’ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಆ ದಿನಗಳ ನೆನಪು ಇನ್ನೂ ಹಸಿರಾಗಿಯೇ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.