ADVERTISEMENT

ಸಿಎಂ ಆಗುತ್ತೇನೆಂದು ಜ್ಯೋತಿಷಿ ಹೇಳಿದ್ದಾರೆ: ಬೊಮ್ಮಾಯಿ ಮಾತು ನೆನೆದ ಅಶೋಕ ಚಂದರಗಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 10:55 IST
Last Updated 28 ಜುಲೈ 2021, 10:55 IST
ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತ ಒಕ್ಕೂಟದ ಸಭೆಯಲ್ಲಿ ಅಶೋಕ ಚಂದರಗಿ ಮಾತನಾಡುತ್ತಿದ್ದಾರೆ. ರೈತ ಮುಖಂಡರೊಂದಿಗೆ ಬಸವರಾಜ ಬೊಮ್ಮಾಯಿ ಇದ್ದಾರೆ (ಸಂಗ್ರಹ ಚಿತ್ರ)
ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತ ಒಕ್ಕೂಟದ ಸಭೆಯಲ್ಲಿ ಅಶೋಕ ಚಂದರಗಿ ಮಾತನಾಡುತ್ತಿದ್ದಾರೆ. ರೈತ ಮುಖಂಡರೊಂದಿಗೆ ಬಸವರಾಜ ಬೊಮ್ಮಾಯಿ ಇದ್ದಾರೆ (ಸಂಗ್ರಹ ಚಿತ್ರ)   

ಬೆಳಗಾವಿ: ‘ಒಂದಿಲ್ಲೊಂದು ದಿನ ಈ ರಾಜ್ಯದ ಚುಕ್ಕಾಣಿ ಹಿಡಿಯುತ್ತೇನೆಂದು ನನಗೆ ಜ್ಯೋತಿಷಿಯೊಬ್ಬರು ಹೇಳಿದ್ದಾರೆ. ಕಾದು ನೋಡೋಣ. ಆದರೆ, ನಮಗೆಲ್ಲ ಜನಪರ ಹೋರಾಟವೇ ಮುಖ್ಯ’.

– ಈಗಿನ ಮುಖ್ಯಮಂತ್ರಿ ಆಗಿರುವ ತಮ್ಮ ಗೆಳೆಯ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ನಡೆದಿದ್ದ ಕಳಸಾ ಬಂಡೂರಿ ಮಹಾದಾಯಿ ನದಿ ತಿರುವು ಯೋಜನೆಯ ಹೋರಾಟ ಸಮಿತಿಯ ಸಭೆಯೊಂದರಲ್ಲಿ ಹೇಳಿದ್ದನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೆನೆದಿದ್ದಾರೆ.

‘ಜನತಾ ಪರಿವಾರದ ದಿನಗಳಿಂದಲೂ ಬಸವರಾಜ ಬೊಮ್ಮಾಯಿ (ಗೆಳೆಯರ ಬಳಗದಲ್ಲಿ ಪ್ರೀತಿಯ ಬಸಣ್ಣ) ಅವರೊಂದಿಗೆ ಗೆಳೆತನವಿದೆ. ಅವರ ಜೊತೆ ಅನೇಕ ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಅವರೇ ಕಾರು ಚಲಾಯಿಸುವಾಗ ಜೊತೆಗೆ ಸುತ್ತಿದ್ದೇವೆ. ಇಬ್ಬರನ್ನೂ ಇನ್ನಷ್ಟು ಸಮೀಪ ತಂದಿದ್ದು 2002ರಲ್ಲಿ ನಡೆದ ಕಳಸಾ ಬಂಡೂರಿ ಮಹಾದಾಯಿ ನದಿ ತಿರುವು ಯೋಜನೆಯ ಹೋರಾಟ. ಹೋರಾಟ ಸಮಿತಿಗೆ ಅವರು ರಾಜ್ಯ ಸಂಚಾಲಕರಾದರೆ, ನಾನು ಬೆಳಗಾವಿ ಜಿಲ್ಲಾ ಸಮಿತಿಯ ಸಂಚಾಲಕನಾಗಿದ್ದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನಿರಂತರ ಹೋರಾಟ ನಡೆಯಿತು. ಆ ಸಂದರ್ಭದಲ್ಲಿ ಅವರು 200 ಕಿ.ಮೀ. ಪಾದಯಾತ್ರೆ ಮಾಡಿ ಹೋರಾಟಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದ್ದರು’.

‘ಜನತಾದಳದ ಅವಸಾನ ಮತ್ತು ರಾಮಕೃಷ್ಣ ಹೆಗಡೆ ಅವರ ನಿಧನದ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ಧ್ರುವೀಕರಣದಲ್ಲಿ ಅವರು ಬಿಜೆಪಿಯತ್ತ ಮುಖ ಮಾಡಿದರು. 2008ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಆಯ್ಕೆಯಾದರು. ಆರಿಸಿ ಬಂದ ಮೂರನೇ ದಿನಕ್ಕೆ ಮೊಬೈಲ್‌ ಫೋನಿನಲ್ಲಿ ಸಿಕ್ಕಿದ್ದರು. ಅಭಿನಂದಿಸಿ, ನೀವು ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗುತ್ತೀರಿ ಎಂದೆ. ಸಿಟ್ಟಾದ ಬಸಣ್ಣ, ‘ನೀನು ಭಾಳ ಅಗಾವ ಇದ್ದೀ. ಸುಮ್ನೆ ಏನಾದರೂ ಹೇಳ್ಕೊಂತ ಹೋಗಬ್ಯಾಡಾ. ನನಗಿಂತಲೂ ಹಿರಿಯರು ಇದ್ದಾರೆ’ ಎಂದಿದ್ದರು. ಮಂತ್ರಿಯಾದರು. ಜಲಸಂಪನ್ಮೂಲ ಖಾತೆಯನ್ನೂ ಪಡೆದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಬಂದರು’ ಎಂದು ಹಾದಿಯನ್ನು ಮೆಲುಕು ಹಾಕಿದ್ದಾರೆ.

‘ಅವರು ಬಹಳ ಓದಿಕೊಂಡಿದ್ದಾರೆ. ಏನೇ ನಿರ್ಧಾರ ಕೈಗೊಳ್ಳುವ ಮುನ್ನ ಅಳೆದು ತೂಗಿ ನೋಡುತ್ತಾರೆ. ಯಾರನ್ನೋ ಓಲೈಸಲು ತಪ್ಪು ನಿರ್ಧಾರ ಕೈಗೊಳ್ಳುವವರಲ್ಲ. ರಾಜ್ಯದ ನೆಲ, ಜಲ, ಭಾಷೆ ಬಗ್ಗೆ ತಂದೆಯಂತೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಅವರಿಗೆ ಮುಕ್ತ ಅವಕಾಶ ಸಿಗಬೇಕಷ್ಟೆ. ಸಿಕ್ಕರೆ ಅವರು ಕರ್ನಾಟಕದಲ್ಲಿ ‘ಬದಲಾವಣೆ ಬಸಣ್ಣ’ ಆಗಬಲ್ಲರೆಂಬ ವಿಶ್ವಾಸ ನನ್ನದು’ ಎನ್ನುತ್ತಾರೆ ಚಂದರಗಿ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.