ಬೆಳಗಾವಿ: ‘ನೆಲೆಗಾಣದ ಮತ್ತು ನೆಲೆಗಾಣಲು ಪರದಾಡುವ ನಿರ್ಲಕ್ಷಿತ ವ್ಯಕ್ತಿಗಳ ಜಗತ್ತನ್ನು ತಮ್ಮ ಕಥೆ, ಕಾದಂಬರಿಗಳ ಮೂಲಕ ಸಮಾಜದೆದುರು ತೆರೆದಿಟ್ಟವರು ಬಸವರಾಜ ಕಟ್ಟೀಮನಿ’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.
ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ ಅವರ ಜನ್ಮ ದಿನಾಚರಣೆ ಮತ್ತು ಸಾಕ್ಷಿಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದರು.
‘ಇದ್ದವರು, ಇಲ್ಲದವರು ಕುರಿತು ಮನಪೂರ್ವಕವಾಗಿ ಚಿಂತಿಸುವಂತೆ ಮಾಡುವುದೇ ಸಾಹಿತ್ಯದ ಉದ್ದೇಶವೆಂದು ಪ್ರತಿಪಾದಿಸುತ್ತ ಬಂದ ಕಟ್ಟೀಮನಿಯವರು, ತಾವು ಯಾರ ಕುರಿತು ಬರೆದರೋ ತಮ್ಮ ನಿಜ ಜೀವನದಲ್ಲಿ ಅಂಥವರ ಕುರಿತೇ ಹೋರಾಟ ಮಾಡಿದವರು’ ಎಂದರು.
ಪರಿಸರವಾದಿ ಶಿವಾಜಿ ಕಾಗಣೀಕರ ಅವರು ಬಸವರಾಜ ಕಟ್ಟೀಮನಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾನುವಾರ ನಿಧನರಾದ ಕಥೆಗಾರ ಮೊಗಳ್ಳಿ ಗಣೇಶ್ ಕುರಿತು ಸಾಹಿತಿ ಡಿ.ಎಸ್. ಚೌಗಲೆ, ಸಿದ್ದರಾಮ ತಳವಾರ್ ನುಡಿ ನಮನ ಸಲ್ಲಿಸಿದರು.
ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸದಸ್ಯೆ ಕೆ.ಆರ್. ಸಿದ್ದಗಂಗಮ್ಮ ವಂದಿಸಿದರು. ದೇಮಣ್ಣ ಸೊಗಲದ ಮತ್ತು ಬಾಲಕೃಷ್ಣ ನಾಯಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.