ADVERTISEMENT

ಬೆಳಗಾವಿ: ಮತ್ತೊಮ್ಮೆ ಜಾರಕಿಹೊಳಿ ಸಹೋದರರ ಸವಾಲ್‌!

ವಿಧಾನಪರಿಷತ್‌ ಚುನಾವಣೆ: ರಾಜ್ಯದ ಗಮನಸೆಳೆದಿರುವ ಬೆಳಗಾವಿ ಕ್ಷೇತ್ರ

ಎಂ.ಮಹೇಶ
Published 24 ನವೆಂಬರ್ 2021, 19:30 IST
Last Updated 24 ನವೆಂಬರ್ 2021, 19:30 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯು, ಇಲ್ಲಿನ ಪ್ರಭಾವಿ ನಾಯಕರಾದ ಜಾರಕಿಹೊಳಿ ಸಹೋದರರ ನಡುವಿನ ಸವಾಲ್‌ನಿಂದಾಗಿ ಇಡೀ ರಾಜ್ಯದ ಗಮನಸೆಳೆದಿದೆ.

ದ್ವಿಸದಸ್ಯ ಸ್ಥಾನಗಳಿದ್ದರೂ ತಲಾ ಒಂದೇ ಸ್ಥಾನಕ್ಕಷ್ಟೆ ಸ್ಪರ್ಧಿಸುವ ನಿಲುವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾಡಿವೆ. ಒಬ್ಬೊಬ್ಬರಿಗೆ ಮಾತ್ರವೇ ಅಧಿಕೃತವಾಗಿ ಟಿಕೆಟ್ ನೀಡಿವೆ. ಈ ನಡುವೆ, ಹಿಂದೆ ಕಾಂಗ್ರೆಸ್‌ನಲ್ಲಿದ್ದ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದ ಗೋಕಾಕದ ಉದ್ಯಮಿ ಲಖನ್‌ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಚುನಾವಣಾ ಕಣದಲ್ಲಿ ತಿರುವು ಪಡೆದುಕೊಳ್ಳುವಂತೆ ಮಾಡಿದೆ. ತ್ರಿಕೋನ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಮತ ವಿಭಜನೆಯ ಆತಂಕವೂ ಎದುರಾಗಿದೆ.

ಯಾರ ಮೇಲೆ ಪರಿಣಾಮ?:

ADVERTISEMENT

ಬಿಜೆಪಿಯ ಮಹಾಂತೇಶ ಕವಟಗಿಮಠ ಅವರು ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಚನ್ನರಾಜ ಹಟ್ಟಿಹೊಳಿ ರಾಜಕೀಯ ಭವಿಷ್ಯ ಅರಸುತ್ತಿದ್ದಾರೆ. ಈ ಪಕ್ಷಗಳಿಗೆ ಲಖನ್‌ ಸಡ್ಡು ಹೊಡೆದಿದ್ದಾರೆ. ಮೂರು ಗುಂಪುಗಳಲ್ಲೂ ಜಾರಕಿಹೊಳಿ ಸಹೋದರರ ಅಥವಾ ಕುಟುಂಬದವರ ಪ್ರಭಾವ ಎದ್ದು ಕಾಣುತ್ತಿದೆ. ಈ ಸಹೋದರರ ನಡೆಯು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗಿಂತಲೂ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಅವರ ತಂತ್ರದ ‘ಪ್ರತಿಕೂಲ ಪರಿಣಾಮ’ ಯಾವ ಅಭ್ಯರ್ಥಿ ಮೇಲೆ ಆಗಬಹುದು ಎನ್ನುವ ವಿಶ್ಲೇಷಣೆಗಳೂ ಇಲ್ಲಿ ನಡೆಯುತ್ತಿವೆ.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಭ್ಯರ್ಥಿ ಮಹಾಂತೇಶ ಅವರನ್ನು ಗೆಲ್ಲಿಸಿಕೊಳ್ಳುವ ಜೊತೆಗೆ ಕಾಂಗ್ರೆಸ್‌ ಮಣಿಸುವುದಕ್ಕೂ ಕಾರ್ಯತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್‌ ಪಾಳಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಚುನಾವಣೆಯ ನೇತೃತ್ವ ವಹಿಸಲಾಗಿದೆ.

ಲಖನ್‌ಗೆ ರಮೇಶ ಮತ್ತು ಬಾಲಚಂದ್ರ ಕೂಡ ಬೆಂಬಲ ನೀಡುತ್ತಿದ್ದಾರೆ ಎನ್ನುವ ಮಾತುಗಳೂ ಇವೆ. ರಮೇಶ ಅಳಿಯ ಅಂಬಿರಾವ್ ‍ಪಾಟೀಲ, ಪುತ್ರ ಅಮರನಾಥ ಜಾರಕಿಹೊಳಿ ಮತ್ತು ಆಪ್ತ ವಿವೇಕರಾವ್ ಪಾಟೀಲ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದಾರೆ. ಎಲ್ಲರೂ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದ ಕಣ ರಂಗೇರಿದೆ.

ಕುಟುಂಬದ ಕಾರ್ಯತಂತ್ರ!:

ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನರನ್ನು ಸೇರಿಸುವ ಮೂಲಕ ‘ಬಲ’ ಪ್ರದರ್ಶನ ಮಾಡಿರುವ ಲಖನ್‌ ಸ್ಪರ್ಧೆಯ ಹಿಂದೆ ಕುಟುಂಬದವರ ಕಾರ್ಯತಂತ್ರ ಅಡಗಿದೆ ಎನ್ನಲಾಗುತ್ತಿದೆ. ‘ಜಿಲ್ಲೆಯಲ್ಲಿ ಹಿಂದಿನಿಂದಲೂ ಕುಟುಂಬ ರಾಜಕಾರಣ ನಡೆದುಕೊಂಡು ಬಂದಿದೆ. ಎಲ್ಲ ಪಕ್ಷದಲ್ಲೂ ಜಾರಕಿಹೊಳಿ ಸಹೋದರರ ಅಭಿಮಾನಿಗಳಿದ್ದಾರೆ. ಒಂದು ಪಕ್ಷದಿಂದ ಸ್ಪರ್ಧಿಸಿದರೆ ಆ ಪಕ್ಷದ ಮತಗಳಷ್ಟೆ ಬರಬಹುದು. ಅದೇ, ಪಕ್ಷೇತರರಾಗಿ ಸ್ಪರ್ಧಿಸಿದರೆ ಎಲ್ಲ ಕಡೆಯಿಂದಲೂ ಮತಗಳನ್ನು ‘ಸೆಳೆಯಬಹುದು’ ಎನ್ನುವುದು ಈ ಕುಟುಂಬದ ತಂತ್ರಗಾರಿಕೆಯಾಗಿದೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಕಾಂಗ್ರೆಸ್‌ನ ಚನ್ನರಾಜ ಅವರನ್ನು ಸೋಲಿಸುವ ಮೂಲಕ ತಮ್ಮ ‘ರಾಜಕೀಯ ಕಡು ವೈರಿ’ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮುಖಭಂಗ ಮಾಡಬೇಕು ಎನ್ನುವುದು ರಮೇಶ ಯೋಜನೆಯಾಗಿದೆ. ಇನ್ನೊಂದೆಡೆ, ಇಲ್ಲಿ ಗೆಲ್ಲುವ ಮೂಲಕ ಪಕ್ಷದಲ್ಲಿ ಮತ್ತು ಭವಿಷ್ಯದಲ್ಲಿ ತಮ್ಮ ಸ್ಥಾನ ಬಲಪಡಿಸಿಕೊಳ್ಳಬೇಕು ಎನ್ನುವುದು ಸತೀಶ ಅವರ ತಂತ್ರವಾಗಿದೆ. ಹೀಗಾಗಿ ತೀವ್ರ ಪೈಪೋಟಿ ಎದುರಾಗಿದೆ. ಪರಿಣಾಮ, ಜಾರಕಿಹೊಳಿ ಸಹೋದರರೆಲ್ಲರ ಜೊತೆ ಗುರುತಿಸಿಕೊಂಡಿರುವ ಮತದಾರರು ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.

ಲಖನ್‌ ಸ್ಪರ್ಧೆಯಲ್ಲಿ ಉಳಿದಲ್ಲಿ ಕಣವು ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.

ತೊಂದರೆ ಆಗುವುದಿಲ್ಲ

ಲಖನ್‌ ಜಾರಕಿಹೊಳಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದರು. ಅಧಿಕೃತವಾಗಿ ಪಕ್ಷ ಸೇರಿಲ್ಲ. ಅವರ ಸ್ಪರ್ಧೆಯಿಂದ ನಮಗೆ ತೊಂದರೆ ಆಗುವುದಿಲ್ಲ. ಪಕ್ಷದವರೇ ಆದ ಮತದಾರರಿದ್ದಾರೆ. ಗೆಲ್ಲಲ್ಲು ನಾವೂ ಕಾರ್ಯತಂತ್ರ ರೂಪಿಸಿದ್ದೇವೆ

–ಸಂಜಯ ಪಾಟೀಲ, ಅಧ್ಯಕ್ಷ, ಗ್ರಾಮಾಂತರ ಜಿಲ್ಲಾ ಘಟಕ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.