ಬೆಳಗಾವಿ: ಹುಕ್ಕೇರಿ ತಾಲ್ಲೂಕಿನಲ್ಲಿ ಈಗ ‘ಜೆಕೆ’ ಕಂಪನಿಯದ್ದೇ ಮಾತು. ಕುಳಿತಲ್ಲಿ, ನಿಂತಲ್ಲಿ, ಗುಂಪು ಸೇರಿದಲ್ಲಿ ಮತ್ತು ನಿದ್ದೆಗಣ್ಣಲ್ಲಿ ಕೇಳಿಸುವುದು ಒಂದೇ ಪ್ರಶ್ನೆ: ನಿಮ್ಮದು ‘ಜೆ’ ಕಂಪನಿಯೋ? ‘ಕೆ’ ಕಂಪನಿಯೋ?
ಇದ್ಯಾವ ಹೊಸ ಕಂಪನಿ ಎಂದು ಹುಬ್ಬೇರಿಸಬೇಡಿ. ಜಾರಕಿಹೊಳಿ (ಜೆ) ಹಾಗೂ ಕತ್ತಿ (ಕೆ) ಕುಟುಂಬದ ಮಧ್ಯೆ ನಡೆದಿರುವ ರಾಜಕೀಯದ ಚದುರಂಗದ ಬಗ್ಗೆ ಜನ ಮಾತನಾಡುವ ‘ಕೋಡ್ ವರ್ಡ್’ಗಳಿವು.
ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಈವರೆಗೆ ಅಭ್ಯರ್ಥಿಗಳ ಪೆನಲ್ ನಿಕ್ಕಿಯಾಗದ ಕಾರಣ ಮತದಾರರು ಈ ರೀತಿಯ ಸೂಚ್ಯ ಪದಗಳನ್ನು ಬಳಸುತ್ತಿದ್ದಾರೆ. ಎರಡೂ ‘ಸಾಹುಕಾರ’ ಕುಟುಂಬಗಳು ಸಹಕಾರ ಸಂಘಗಳ ಮೇಲೆ ‘ಬಿಗಿ ಹಿಡಿತ’ ಸಾಧಿಸಿದ್ದು ಕೂಡ ಇದಕ್ಕೆ ಕಾರಣ.
ನೂರು ವರ್ಷ ಪೂರೈಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ರಮೇಶ ಕತ್ತಿ 36 ವರ್ಷಗಳಿಂದ ನಿರ್ದೇಶಕರು ಮತ್ತು ನಾಲ್ಕು ಬಾರಿ ಅಧ್ಯಕ್ಷರಾಗಿದ್ದಾರೆ. ಬ್ಯಾಂಕ್‌ನ ಏಳು– ಬೀಳುಗಳನ್ನು ಕಂಡು ‘ಪಳಗಿದ ಹುಲಿ’ ಎಂದೇ ಅವರು ಪರಿಗಣಿತ, ಜನಜನಿತ. ಇಂಥ ಬಲಿಷ್ಠ ಹುಲಿಯನ್ನು ಬ್ಯಾಂಕ್‌ನಿಂದ ದೂರ ಇಡಬೇಕು ಎಂದು ಜಾರಕಿಹೊಳಿ ಸಹೋದರರು ಶತಾಯ– ಗತಾಯ ಪ್ರಯತ್ನ ನಡೆಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವಾದರು ಎಂದು ಮುನಿಸಿಕೊಂಡ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ರಮೇಶ ಕತ್ತಿ ವಿರುದ್ಧ ಸಿಡಿದೆದ್ದರು. ಅವರು ಸೋತಿದ್ದು ಜಾರಕಿಹೊಳಿ ಕುಟುಂಬದ ವಿರುದ್ಧವೇ ಆದರೂ ಅದೇ ಕುಟುಂಬದೊಂದಿಗೆ ಸೇರಿ ಕತ್ತಿ ಕುಟುಂಬದ ವಿರುದ್ಧ ‘ಕತ್ತಿ’ ಮಸೆದರು. ಪರಿಣಾಮ, ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ನೀಡಬೇಕಾಯಿತು. ಉಳಿದ ಒಂದು ವರ್ಷದ ಅವಧಿಗೆ ಜಾರಕಿಹೊಳಿ ಅವರ ಆಪ್ತ ಅಪ್ಪಾಸಾಹೇಬ ಕುಲಗೂಡೆ ಅವರಿಗೆ ಅಧ್ಯಕ್ಷ ಪಟ್ಟ ಒಲಿಯಿತು.
ಇದೀಗ ನಿರ್ದೇಶಕ ಸ್ಥಾನದಲ್ಲೂ ಕತ್ತಿ ಅವರನ್ನು ಸೋಲಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಹಾಗೂ ರಮೇಶ ಗುಂಪುಗೂಡಿ ನಿಂತಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ಇದೇ ಗುಂಪಿನ ಜತೆಗೆ ಸಾಗಿದ್ದು ಈಗ ಅಚ್ಚರಿಯಾಗಿ ಉಳಿದಿಲ್ಲ. ರಾಜೇಂದ್ರ ಪಾಟೀಲ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ ತಾವೇ ಅಭ್ಯರ್ಥಿಗಳು ಎಂಬಷ್ಟು ‘ಸೀರಿಯಸ್’ ಆಗಿದ್ದಾರೆ.
ಕತ್ತಿ ಸಾಮರ್ಥ್ಯ ಏನು?:
‘ನಾನು 1999ರಲ್ಲಿ ಅಧಿಕಾರ ಪಡೆದಾಗ ಬ್ಯಾಂಕು ₹28.60 ಕೋಟಿ ಷೇರು ಬಂಡವಾಳ ಹೊಂದಿತ್ತು. 2024ರ ಮಾರ್ಚ್ ಅಂತ್ಯಕ್ಕೆ (ರಾಜೀನಾಮೆ ನೀಡಿದಾಗ) ₹273.66 ಕೋಟಿ ಇತ್ತು. ₹369.28 ಕೋಟಿ ಇದ್ದ ಠೇವಣಿ ₹5,797.29 ಕೋಟಿಗೆ ಏರಿತ್ತು. ದುಡಿಯುವ ಬಂಡವಾಳ ₹577.83 ಕೋಟಿಯಿಂದ ₹7,894.96 ಕೋಟಿಗೆ ನೆಗೆದಿತ್ತು. ಆಗ ₹442.15 ಕೋಟಿ ಸಾಲ ನೀಡಲಾಗಿತ್ತು. ಈಗ ₹5,230.74 ಕೋಟಿ ನೀಡಲಾಗಿದೆ’ ಎಂಬ ಹಿರಿಮೆಯನ್ನು ರಮೇಶ ಕತ್ತಿ ಪ್ರಚಾರಕ್ಕೆ ಬಳಸುತ್ತಿದ್ದಾರೆ.
‘ರಮೇಶ ಕತ್ತಿ ಅವರ ಜೊತೆಗೆ ವಾಹನ ಚಾಲಕ ಮಾತ್ರ ಇದ್ದ. ಒಬ್ಬರ ಬೆಂಬಲವೂ ಇಲ್ಲದ ವೇಳೆ ನಾವೇ ಅವರನ್ನು ಅಧ್ಯಕ್ಷ ಗಾದಿ ಮೇಲೆ ಕೂಡಿಸಿದ್ದೇವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಬಹಿರಂಗವಾಗಿಯೇ ಚುರುಕು ಮುಟ್ಟಿಸಿದ್ದಾರೆ.
‘ಹೊರಗಿನಿಂದ ಬಂದವರು ಹುಕ್ಕೇರಿ ತಾಲ್ಲೂಕಿನ ರಾಜಕೀಯ ಹಾಳು ಮಾಡುತ್ತಿದ್ದಾರೆ’ ಎಂದು ರಮೇಶ ಕತ್ತಿ ಗುಡುಗಿದ್ದರೆ; ‘ನಾವೇನು ಹೊರಗಿನವರಲ್ಲ. ಹುಕ್ಕೇರಿ ತಾಲ್ಲೂಕಿನ ಜಾರಕಿಹೊಳಿ ಗ್ರಾಮದ ಗೌಡರು’ ಎಂದು ಸತೀಶ ತಿರುಗೇಟು ನೀಡಿದ್ದಾರೆ.
ಕತ್ತಿ ಅವರ ಪರ ಶಾಸಕ ನಿಖಿಲ್ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ನಿಂತಿದ್ದಾರೆ. ಸಚಿವ ಸತೀಶ ಪರ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ನಿಂತಿದ್ದಾರೆ. ಎರಡೂ ಕಡೆಯ ಆಟದಲ್ಲಿ ‘ಫೀಲ್ಡಿಂಗ್’ ಯಾರು ಕರಾರುವಕ್ಕಾಗಿ ಮಾಡುತ್ತಾರೋ ಅವರಿಗೆ ಗೆಲುವಾಗಲಿದೆ ಎಂಬುದು ಜನ ಮಾತು.
ರಾಜೇಂದ್ರ ಪಾಟೀಲ ಸುತ್ತಮುತ್ತ...:
ಜಾರಕಿಹೊಳಿ ಸಹೋದರರು ಗುರುತಿಸಿರುವ ಅಭ್ಯರ್ಥಿ ರಾಜೇಂದ್ರ ಪಾಟೀಲ ಅವರು ಸಂಗಮ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ. ಪ್ರಭಾವಿ ನಾಯಕರಾಗಿದ್ದ ವಿವಿಧ ಸಚಿವ ಸ್ಥಾನ ಹೊಂದಿದ್ದ ದಿವಂಗತ ಮಲ್ಲಾರಿಗೌಡ ಪಾಟೀಲ ಅವರ ಪುತ್ರ. ಹುಕ್ಕೇರಿ ತಾಲ್ಲೂಕಿನಲ್ಲಿ ರೈತ ಬಳಗ ಹೊಂದಿದ್ದು ರಾಜಕೀಯ ಹಿನ್ನೆಲೆ ಕೂಡ ಇದೆ ಎಂಬ ಕಾರಣ ರಮೇಶ ಕತ್ತಿ ವಿರುದ್ಧ ಪ್ರಬಲ ಪೈಪೋಟಿ ನೀಡುತ್ತಾರೆ ಎಂಬುದು ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.