ADVERTISEMENT

ಬೆಳಗಾವಿ: ಉಪ ನೋಂದಣಿ ಕಚೇರಿಗೆ ವಕೀಲರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:19 IST
Last Updated 8 ಏಪ್ರಿಲ್ 2021, 14:19 IST

ಬೆಳಗಾವಿ: ‘ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಏಜೆಂಟರ ಹಾವಳಿ ಮಿತಿ ಮೀರಿದೆ’ ಎಂದು ಆರೋಪಿಸಿ ವಕೀಲರು ಉಪ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ‍‍ಪ್ರತಿಭಟಿಸಿದರು.

‘ನೋಂದಣಿಗಾಗಿ ₹ 1ಸಾವಿರದಿಂದ ₹ 5ಸಾವಿರದವರೆಗೆ ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪಗಳಿವೆ. ಮದುವೆ ನೋಂದಣಿಗೆ ₹ 5ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ. ಇದರಿಂದ ಜನರಿಗೆ ಬಹಳ ತೊಂದರೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಪ ನೋಂದಣಾಧಿಕಾರಿ ಸಂಕನಗೌಡಗೆ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತ‍ಪಡಿಸಿದರು.

ಇಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಬೇಕು ಎಂದು ಕಂದಾಯ ಸಚಿವರನ್ನು ಒತ್ತಾಯಿಸಿದರು.

ADVERTISEMENT

ಮಾರ್ಕೆಟ್ ಠಾಣೆ ಸಿಪಿಐ ಶಿವಯೋಗಿ ಸ್ಥಳಕ್ಕೆ ಬಂದು ಮಾಹಿತಿ ಪಡೆದರು. ಬಳಿಕ ವಕೀಲರು, ಜಿಲ್ಲಾ ನೋಂದಣಾಧಿಕಾರಿ ಮಹಾಂತೇಶ ಪಟಾದಾರ ಅವರಿಗೆ ಮನವಿ ಸಲ್ಲಿಸಿದರು. ಉಪ ನೋಂದಣಾಧಿಕಾರಿ ಕಚೇರಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.