ADVERTISEMENT

ತಡರಾತ್ರಿವರೆಗೂ ನಡೆದ ಮತ ಎಣಿಕೆ

ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 11:45 IST
Last Updated 1 ಆಗಸ್ಟ್ 2019, 11:45 IST

ಬೆಳಗಾವಿ: ಜಿಲ್ಲಾ ವಕೀಲರ ಸಂಘದ ವಿವಿಧ 11 ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಬಿರುಸಿನ ಮತದಾನ ನಡೆಯಿತು.

ಬೆಳಿಗ್ಗೆ 10ರಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5.30‌‌‌ರವರೆಗೆ ನಡೆಯಿತು. ಒಟ್ಟು 1,865 ಮತದಾರರ ಪೈಕಿ, 1531 ಮಂದಿ ಚಲಾಯಿಸಿದರು. ವಕೀಲರ ಸಂಘದ ಸದಸ್ಯರೂ ಆದ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ ಮತ ಚಲಾಯಿಸಿದ ಪ್ರಮುಖರು. 38 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾನ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಜೊತೆಗೆ ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ನಡೆಯಿತು. ಎಲ್ಲ ಪ್ರಕ್ರಿಯೆಗಳೂ ಸುಗಮವಾಗಿ ನಡೆದವು.

ಪ್ರತಿ ಮತದಾರ 11 ಮತಗಳನ್ನು ಚಲಾಯಿಸಲು ಅವಕಾಶವಿತ್ತು. 40 ಮಂದಿ ಮತದಾನ ಪ್ರಕ್ರಿಯೆಯ ಕೆಲಸ ನಿರ್ವಹಿಸಿದರು. ಮತ ಎಣಿಕೆ ಕಾರ್ಯ ತಡರಾತ್ರಿವರೆಗೂ ನಡೆಯಿತು.

ADVERTISEMENT

ಅಧ್ಯಕ್ಷ ಸ್ಥಾನಕ್ಕಾಗಿ ಎಂ.ಎನ್. ಕುಲಕರ್ಣಿ, ಎ.ಜಿ. ಮುಳವಾಡಮಠ, ಎಸ್.ಎಸ್. ಕಿವಡಸಣ್ಣವರ, ದಿನೇಶ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕಾಗಿ ಗಜಾನನ ಪಾಟೀಲ, ಸುಧೀರ ಚವಾಣ, ವಿಠ್ಠಲ ಕಾಮತೆ, ಸಿ.ಟಿ. ಮಜಗಿ, ಸಚಿನ ಶಿವಣ್ಣವರ, ಜೆ.ಎಸ್. ಮಂಡ್ರೋಳಿ ಕಣದಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಗುರುಸಿದ್ದೇಶ್ವರ ಹುಲ್ಲೇರ, ಜಿ.ಸಿ. ಕುಸನೂರ, ಆರ್.ಸಿ. ಪಾಟೀಲ, ಆರ್.ಎಲ್. ಸುಲಧಾಳ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ದೇವರಾಜ ಬಸ್ತವಾಡೆ, ಶಿವಪುತ್ರಪ್ಪ ಫಟಕಳ, ಹಿರೇಮಠ, ಮಹಾವೀರ ಪಾಟೀಲ, ಪಿ.ಬಿ. ಹಂಪಣ್ಣವರ, ಕೆಂಪಣ್ಣ ಯಾದಗೂಡೆ ಸ್ಪರ್ಧಿಸಿದ್ದರು.

ವ್ಯವಸ್ಥಾಪನಾ ಸಮಿತಿಗೆ ಇರ್ಫಾನ್‌ ಬಯಾಳ, ಪ್ರಹ್ಲಾದ ಗಡಾದಿ, ಯಲ್ಲಪ್ಪ ಗಾಣಗಿ, ದೀಪಕ ಗಸ್ತೆ, ರಮೇಶ ಗೌಂಡಾಡಗಿ, ಆನಂದ ಗುಂಡಾಳಿ, ಸಂಜೀವಕುಮಾರ ಜಾಯಿ, ಕಮಲೇಶ ಮಾಯಣ್ಣಾಚೆ, ದೀಪಾ ಘೋರ್ಪಡೆ, ಬಸವರಾಜ ಓಸಿ, ಪ್ರಭಾಕರ ಪವಾರ, ಸುವರ್ಣಾ ಹೋಳಿ, ಹನುಮಂತ ನಾವಿ, ಪ್ರವೀಣ ಪಿಸೆ, ಸಿದ್ದಾರ್ಥರಾಜೆ ಸಾವಂತ ಸ್ಪರ್ಧಿಸಿದ್ದರು. ಮಹಿಳಾ ಪ್ರತಿನಿಧಿ ಸ್ಥಾನಕ್ಕೆ ಪ್ರೀತಿ ದೇಸಾಯಿ, ಆರತಿ ನಂದಿ, ಸರಿತಾ ಶ್ರೇಯೇಕರ ನಡುವೆ ಪೈಪೋಟಿ ಕಂಡುಬಂದಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಆರ್.ಸಿ. ಪಾಟೀಲ, ಉಪಾಧ್ಯಕ್ಷರಾಗಿ ಸಿ.ಟಿ. ಮಜ್ಜಗಿ ಹಾಗೂ ಗಜಾನನ ಪಾಟೀಲ, ವ್ಯವಸ್ಥಾಪನಾ ಸಮಿತಿಯ ಮಹಿಳಾ ಸ್ಥಾನಕ್ಕೆ ಸರಿತಾ ಶ್ರೇಯೇಕರ ಆಯ್ಕೆಯಾದರು. ಉಳಿದ ಸ್ಥಾನಗಳ ಮತ ಎಣಿಕೆ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.