ADVERTISEMENT

ಬಸ್ ನಿಲ್ದಾಣದೊಳಗೆ ಹೊಂಡ, ಗುಂಡಿ! ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ಸಮಯ ಬೇಕು?

ಎಂ.ಮಹೇಶ
Published 13 ಜುಲೈ 2021, 14:05 IST
Last Updated 13 ಜುಲೈ 2021, 14:05 IST
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ ಹೊಂಡ–ಗುಂಡಿಗಳಿಂದ ತುಂಬಿದೆ/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ ಹೊಂಡ–ಗುಂಡಿಗಳಿಂದ ತುಂಬಿದೆ/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ನಿಲ್ದಾಣದ ಮರು ನಿರ್ಮಾಣ ಕಾಮಗಾರಿಯು ಕುಂಟುತ್ತಾ ಸಾಗಿರುವುದು ಪ್ರಯಾಣಿಕರಿಗೆ ಶಾಪವಾಗಿ ಪರಿಣಮಿಸಿದೆ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಬಸ್‌ಗಳ ಪ್ರಮುಖ ನಿಲ್ದಾಣ ಎಂಬ ಹೆಗ್ಗಳಿಕೆ ಗಳಿಸಿದ್ದು, ಸಿದ್ಧಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆ ಪ್ರಯಾಣಿಕರಿಂದ ಕೇಳಿಬರುತ್ತಿದೆ.

ಸದ್ಯ ಮಳೆಗಾಲವಾದ್ದರಿಂದ ಆವರಣವೆಲ್ಲವೂ ಕೆಸೆರು ಗದ್ದೆಯಂತಾಗಿದೆ. ಹೊಂಡ–ಗುಂಡಿಯೊಳಗೆ ಸರ್ಕಸ್ ಮಾಡಿಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಂಪು ಮಣ್ಣಿನ ಕೆಸರಿನಲ್ಲಿ ನಡೆದಾಡುವವರು ಕಾಲು ಜಾರಿ ಬಿದ್ದ ಘಟನೆಗಳೂ ನಡೆದಿವೆ. ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರಿನಲ್ಲಿರುವ ಈ ನಿಲ್ದಾಣ ದುಃಸ್ಥಿತಿಯಲ್ಲಿದೆ.

ADVERTISEMENT

ಲಕ್ಷ್ಯ ವಹಿಸಿಲ್ಲ:

ನೂರಾರು ಬಸ್‌ಗಳು, ಸಾವಿರಾರು ಪ್ರಯಾಣಿಕರು ಮತ್ತು ಜನರು ಸೇರುವ ಇಲ್ಲಿ ಒಂದೆಡೆ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಬಸ್‌ಗಳು ಕಾರ್ಯಾಚರಿಸುತ್ತಿವೆ. ಕಾಮಗಾರಿಗೆ ಸಕಾಲಕ್ಕೆ ಜಾಗ ಬಿಟ್ಟುಕೊಡದಿರುವುದು, ಅನುದಾನ ಕೊರತೆ, ಮೇಲುಸ್ತುವಾರಿಯಲ್ಲಿ ಆಗಿರುವ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳು ಲಕ್ಷ್ಯ ಕೊಡದಿರುವುದು ಮೊದಲಾದ ಕಾರಣಗಳಿಂದಾಗಿ ಭೌತಿಕ ಪ್ರಗತಿ ಆಮೆಗತಿಯಲ್ಲಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಕೆಲಸ ಇನ್ನೂ ಆಗಿಲ್ಲ.

2016ರ ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ‘2018ರ ಜನವರಿಗೆ ಪೂರ್ಣಗೊಳಿಸಬೇಕು. ಫೆಬ್ರುವರಿಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗಬೇಕು. ವಿಳಂಬವಾದರೆ ದಂಡ ಹಾಕಲಾಗುವುದು’ ಎಂಬ ಸೂಚನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ವಾಸ್ತವವಾಗಿ ಕಾಮಗಾರಿಯು 2017ರ ಜನವರಿಯ ಬಳಿಕ ಆರಂಭವಾಯಿತು.

ಖಾಸಗಿ ಕಂಪನಿಯೊಂದು ₹ 32.48 ಕೋಟಿ ಮೊತ್ತದ ಈ ಕಾಮಗಾರಿ ಗುತ್ತಿಗೆ ಪಡೆದಿದೆ. ಗುತ್ತಿಗೆ ಪ್ರಕಾರ, 2019ರ ನವೆಂಬರ್‌ಗೆ ಬಸ್‌ ನಿಲ್ದಾಣ ಸಜ್ಜಾಗಬೇಕಿತ್ತು.

ಹಲವು ಕೆಲಸ:

ವಿವಿಧ ಕಟ್ಟಡಗಳು, ನಿಲ್ದಾಣ ಆವರಣದಲ್ಲಿ ಕಾಂಕ್ರೀಟ್‌ ಹಾಕುವುದು, ರ‍್ಯಾಂಪ್‌ಗಳು, ಶೌಚಾ­ಲಯಗಳು, ವಾಣಿಜ್ಯ ಮಳಿಗೆಗಳ ಕಟ್ಟಡ, ಸಂಚಾರ ನಿರೀಕ್ಷಕರ ಕೊಠಡಿ, ವಿಶ್ರಾಂತಿ ಗೃಹ, ನೀರು ಮರುಬಳಕೆ ಘಟಕ, ವಾಹನಗಳ ನಿಲುಗಡೆಗೆ ಜಾಗ, ಮೊದಲಾದವುಗಳನ್ನು ಹೊಸದಾಗಿ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭೂಸಾರಿಗೆ ನಿರ್ದೇಶನಾಲಯ ಆರ್ಥಿಕ ನೆರವು ನೀಡಿದೆ. ಕೆಲವು ಕಟ್ಟಡಗಳ ಕೆಲಸ ನಡೆದಿದೆ.

ಈ ನಿಲ್ದಾಣದ ಮೂಲಕ ಬೆಳಗಾವಿ ಸೇರಿದಂತೆ ವಿವಿಧ ಘಟಕಗಳ 2ಸಾವಿರಕ್ಕೂ ಹೆಚ್ಚಿನ ಬಸ್‌ಗಳು ಸಂಚರಿಸುತ್ತವೆ. ನಿತ್ಯ ಸರಾಸರಿ 60ಸಾವಿರಕ್ಕೂ ಹೆಚ್ಚಿನ ಜನರು ಬಳಸುತ್ತಾರೆ.

‘ಈವರೆಗೆ ಶೇ 70ರಷ್ಟು ಕೆಲಸವಾಗಿದೆ. ಒಂದೆಡೆ ಬಸ್‌ಗಳ ಕಾರ್ಯಾಚರಣೆ, ಇನ್ನೊಂದೆಡೆ ಕಾಮಗಾರಿ ಎರಡೂ ನಡೆಯಬೇಕಿದೆ. ಹೀಗಾಗಿ, ಸ್ವಲ್ಪ ತೊಂದರೆಯಾಗಿದೆ. ಮಳೆಗಾಲದಲ್ಲಿ ಸರಿಯಾಗಿ ಕೆಲಸ ನಡೆದಿಲ್ಲ. ಕೋವಿಡ್ 1ನೇ ಹಾಗೂ 2ನೇ ಅಲೆಯಿಂದಲೂ ತೊಡಕಾಯಿತು. ಗುತ್ತಿಗೆದಾರರು ನಾಸಿಕ್‌ನವರು. ಕೋವಿಡ್ ವೇಳೆ ಮಹಾರಾಷ್ಟ್ರದ ಕಾರ್ಮಿಕರು ಬರಲಾಗಲಿಲ್ಲ. ಈವರೆಗೆ ₹ 22 ಕೋಟಿಗೂ ಅಧಿಕ ಭೌತಿಕ ಪ್ರಗತಿಯಾಗಿದೆ’ ಎಂದು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ ವಿ. ಕಬಾಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾರಣಾಂತರಗಳಿಂದ ವಿಳಂಬ

ಬಸ್‌ ನಿಲ್ದಾಣದ ಕಾಮಗಾರಿ ಕಾರಣಾಂತರಗಳಿಂದ ವಿಳಂಬವಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.

– ಪ್ರಕಾಶ ವಿ.ಕಬಾಡೆ, ಕಾರ್ಯನಿರ್ವಾಹಕ ಎಂಜಿನಿಯರ್, ಎನ್‌ಡಬ್ಲ್ಯುಕೆಆರ್‌ಟಿಸಿ

ಬಹಳ ಕಷ್ಟವಾಗುತ್ತಿದೆ

ಕೆಸರು ಗದ್ದೆಯಂತೆ ಆಗಿರುವುದರಿಂದಾಗಿ ಇಲ್ಲಿ ನಡೆದಾಡುವುದಕ್ಕೂ ಕಷ್ಟವಾಗುತ್ತಿದೆ. ನಿಲ್ದಾಣವೆಂದರೆ ಆಸರೆಯಂತಿರಬೇಕು. ವೃದ್ಧರು, ಮಕ್ಕಳು, ಆಸ್ಪತ್ರೆಗೆಂದು ಬರುವ ರೋಗಿಗಳಿಗೆ ಬಹಳ ಕಷ್ಟವಾಗುತ್ತಿದೆ.

–ಪರಶುರಾಮ ಮಾನೋಜಿ, ಪ್ರಯಾಣಿಕ, ಜಾಗನೂರು

ತ್ವರಿತವಾಗಿ ನಡೆಯಲಿ

ಈ ಬಸ್ ನಿಲ್ದಾಣ ಗುಂಡಿ–ಹೊಂಡಗಳಿಂದಲೇ ತುಂಬಿ ಹೋಗಿದೆ. ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇದೇ ಪರಿಸ್ಥಿತಿ ಇದ್ದರೆ ಪ್ರಯಾಣಿಕರಿಗೆ ಬಹಳ ತ್ರಾಸಾಗುತ್ತದೆ.

–ಸುರೇಶ ವಗ್ಗಣ್ಣವರ, ಪ್ರಯಾಣಿಕ, ಮುನವಳ್ಳಿ

ನಿಗದಿಯಾಗಿದ್ದೆಷ್ಟು, ಖರ್ಚಾಗಿದ್ದೆಷ್ಟು?

₹ 32.48 ಕೋಟಿ

ಯೋಜನೆಯ ಒಟ್ಟು ಮೊತ್ತ

₹ 22 ಕೋಟಿ

ಈವರೆಗೆ ಖರ್ಚಾಗಿರುವ ಹಣ

ಶೇ 70

ಈವರೆಗೆ ಆಗಿರುವ ಕಾಮಗಾರಿಯ ಪ್ರಗತಿ

40

ನಿರ್ಮಾಣಗೊಳ್ಳಲಿರುವ ಒಟ್ಟು ಫ್ಲಾಟ್‌ಫಾರಂಗಳು

60,000

ನಿತ್ಯವೂ ಈ ನಿಲ್ದಾಣವನ್ನು ಬಳಸುವವರ ಸಂಖ್ಯೆ

2,000

ಇಲ್ಲಿ ನಿತ್ಯ ಸಂಚರಿಸುವ ಬಸ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.