ADVERTISEMENT

ಮೇಯರ್‌, ಉಪಮೇಯರ್ ಮೀಸಲಾತಿ ಬದಲಾವಣೆ

ಸಾಮಾನ್ಯ ಮಹಿಳೆ, ಹಿಂ.ವರ್ಗ ‘ಬಿ’ ಮಹಿಳೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 15:13 IST
Last Updated 26 ಜನವರಿ 2022, 15:13 IST

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಮೀಸಲಾತಿ ವಿಷಯ ತಿರುವು ಪಡೆದುಕೊಂಡಿದೆ. 2018ರ ಸೆ.3ರಲ್ಲಿ ಮಾಡಿದ್ದ ಆದೇಶದಂತೆ 21ನೇ ಅವಧಿಗೆ ನಿಗದಿಪಡಿಸಿದಂತೆ ಕ್ರಮವಾಗಿ ಸಾಮಾನ್ಯ ಮಹಿಳೆ ಮತ್ತು ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಸ್ಥಾನ ಮೀಸಲುಗೊಳಿಸಿ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್. ಪ್ರಸಾದ್ ತಿಳಿಸಿದ್ದಾರೆ.

‘ಮೇಯರ್‌ ಸ್ಥಾನವು ಸಾಮಾನ್ಯ ಮತ್ತು ಉಪಮೇಯರ್‌ ಸ್ಥಾನವು ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ ಎಂದು ಈ ಹಿಂದಿನ ಆದೇಶದಲ್ಲಿ ತಿಳಿಸಲಾಗಿದೆ’ ಎಂದು ಆಡಳಿತಾಧಿಕಾರಿಯೂ ಆಗಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದರು. ಅದರಂತೆ ಆಕಾಂಕ್ಷಿಗಳು ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೀಗ, ಮೀಸಲಾತಿ ಬದಲಾದ್ದರಿಂದ ಆ ವರ್ಗಗಳ ಸದಸ್ಯರು ಗಾದಿ ಪಡೆದುಕೊಳ್ಳಲು ಲಾಬಿ ಆರಂಭಿಸಿದ್ದಾರೆ. ಚುನಾವಣೆ ದಿನಾಂಕ ನಿಗದಿಯಾಗಿಲ್ಲ.

ಅನುಸರಿಸಬೇಕಾದ ಮೀಸಲಾತಿ ವಿಷಯದ ಕುರಿತು ಸ್ಪಷ್ಟೀಕರಣ ನೀಡುವಂತೆ ಮಹಾನಗರಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ADVERTISEMENT

‘ಮೇಯರ್‌ ಮತ್ತು ಉಪಮೇಯರ್ ಮೀಸಲಾತಿ ಬಗ್ಗೆ ಪರಿಶೀಲಿಸಲಾಗಿದೆ. ಅಧಿಸೂಚನೆ ಅನ್ವಯ 2018ರ ಸಾಲಿನಲ್ಲಿ 20ನೇ ಅವಧಿಗೆ ನಿಗದಿಪಡಿಸಲಾಗಿದ್ದ ಮೀಸಲಾತಿ ಅನುಸಾರ ಮೇಯರ್‌ ಮತ್ತು ಉಪಮೇಯರ್‌ ಸ್ಥನಗಳ ಚುನಾವಣೆ ನಡೆದಿದೆ. ಆದರೆ, 2019 ಹಾಗೂ 2020ನೇ ಸಾಲಿನಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದ ಹಿನ್ನೆಲೆಯಲ್ಲಿ ಚುನಾವಣೆಗಳು ನಡೆದಿರಲಿಲ್ಲ. ಆದ್ದರಿಂದ 21ನೇ ಅವಧಿಯ ಮೀಸಲಾತಿ ಅನುಸರಿಸಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

ಇದರೊಂದಿಗೆ ಚುನಾವಣೆಗೆ ಹಾದಿ ಸುಗಮವಾದಂತಾಗಿದೆ. ಚುನಾವಣೆ ನಡೆದು 5 ತಿಂಗಳುಗಳು ಕಳೆದಿದ್ದರೂ ಮೇಯರ್–ಉಪಮೇಯರ್‌ ಆಯ್ಕೆಯಾಗಿಲ್ಲ. ಸದಸ್ಯರು ಪ್ರಮಾಣವಚನ ಸ್ವೀಕರಿಸಿಲ್ಲ.

‘ಪಾಲಿಕೆಗೆ 21, 22 ಹಾಗೂ 23ನೇ ಅವಧಿಯ ಮೀಸಲಾತಿ ನಿಗದಿಪಡಿಸಿ ಆದೇಶಿಸಲಾಗಿತ್ತು. 21ನೇ ಅವಧಿಗೆ ಚುನಾವಣೆ ನಡೆದಿರಲಿಲ್ಲ. ಹೀಗಾಗಿ, ಆ ಮೀಸಲಾತಿ ಅನುಸರಿಸುವಂತೆ ನಿರ್ದೇಶನ ಬಂದಿದೆ. ದಿನಾಂಕ ನಿಗದಿಯಾಗಿಲ್ಲ’ ಎಂದು ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.