ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ: ಮತದಾರರ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 12:52 IST
Last Updated 9 ಜುಲೈ 2021, 12:52 IST
ಬೆಳಗಾವಿ ಮಹಾನಗರ ಪಾಲಿಕೆ
ಬೆಳಗಾವಿ ಮಹಾನಗರ ಪಾಲಿಕೆ   

ಬೆಳಗಾವಿ: ‘ಬೆಳಗಾವಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 58 ವಾರ್ಡ್‌ಗಳ ವಾರ್ಡ್‌ವಾರು ಅಂತಿಮ ಮತದಾರರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ’ ಎಂದು ಆಯುಕ್ತ ಕೆ.ಎಚ್. ಜಗದೀಶ್‌ ತಿಳಿಸಿದ್ದಾರೆ.

‘2021ರ ಜ.1ರ ಅರ್ಹತಾ ದಿನಾಂಕಕ್ಕೆ ಪರಿಷ್ಕರಣೆಯಾದ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯ ಮಾಹಿತಿ ಪಡೆದುಕೊಂಡು 58 ವಾರ್ಡ್‌ಗಳ ಕರಡು ಮತದಾರರ ಪಟ್ಟಿ ಸಿದ್ಧಪಡಿಸಿ ಜೂನ್‌ 28ರಂದು ಜಿಲ್ಲಾಧಿಕಾರಿ, ತಾಲ್ಲೂಕು ಪಂಚಾಯ್ತಿ ಮತ್ತು ಮಹಾನಗರಪಾಲಿಕೆ ಕಚೇರಿಗಳು ಹಾಗೂ ಮತಗಟ್ಟೆಗಳ ವ್ಯಾಪ್ತಿಗಳಲ್ಲಿ ಪ್ರಚಾರಪಡಿಸಲಾಗಿತ್ತು. ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಜುಲೈ 1ರವರೆಗೆ ಅವಕಾಶ ನೀಡಲಾಗಿತ್ತು’ ಎಂದಿದ್ದಾರೆ.

‘ನಿಗದಿತ ದಿನಾಂಕದೊಳಗೆ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಮುದ್ರಕರಿಂದ ಬದಲಾವಣೆಗಳನ್ನು ಮಾಡಿಸಿ ಚೆಕ್‌ಲಿಸ್ಟ್‌ ಪರಿಶೀಲಿಸಿ, ಪಟ್ಟಿ ಪ್ರಕಟಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಉದ್ಯಮಶೀಲತೆ ತರಬೇತಿ

ಬೆಳಗಾವಿ: ಅಂಗವಿಕಲರಿಗೆ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿ ನೀಡಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಸಂಸ್ಥೆಗಳು ಜುಲೈ 19ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 0831-2476096 ಸಂಪರ್ಕಿಸಬಹುದು ಎಂದು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಕಟಣೆ ತಿಳಿಸಿದೆ.

ಬಿಮ್ಸ್‌ಗೆ ₹ 11.46 ಲಕ್ಷ ಕೊಡುಗೆ

ಬೆಳಗಾವಿ: ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿ ಮೇರೆಗೆ ಜಿಲ್ಲೆಯ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ₹ 11.46 ಲಕ್ಷ ಕೊಡುಗೆ ನೀಡಿದ್ದಾರೆ.

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸ್ವೀಕರಿಸಿದರು. ಉದ್ಯಮಿಗಳನ್ನು ಅಭಿನಂದಿಸಿದರು.

ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಪ್ರಭಾರ ನಿರ್ದೇಶಕ ಡಾ.ಉಮೇಶ ಕುಲಕರ್ಣಿ ಮತ್ತು ಆಡಳಿತಾಧಿಕಾರಿ ಎಸ್.ಎಸ್. ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.