
ಬೆಳಗಾವಿ: ‘ದಲಿತ ಸಮುದಾಯ ಬೆಳೆಯಬೇಕಾದರೆ ಸಮುದಾಯದವರು ಒಗ್ಗಟ್ಟು, ಶಿಕ್ಷಣ, ಉದ್ಯಮಶೀಲತೆ, ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯದ ಮೇಲೆ ಗಮನ ಹರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸ– ಅಭಿವೃದ್ದಿ ಸಂಘ ವತಿಯಿಂದ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು.
‘ಎಲ್ಲರೂ ಇತಿಹಾಸ ಅರಿತಾಗ ಮಾತ್ರ ಹೊಸ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ದಲಿತ ಸಮುದಾಯದವರು ಹಾದು ಹೋಗುವ ಜಾಗವನ್ನು ಸ್ವಚ್ಛಗೊಳಿಸಿ, ಅವಮಾನಿಸುವ ಕೆಲಸಗಳಾಗಿವೆ. ಪೂರ್ವಜರು ಅನುಭವಿಸಿದ ಶೋಷಣೆ, ಅನ್ಯಾಯವನ್ನು ಮುಂದಿನ ಪೀಳಿಗೆಯವರು ಅನುಭವಿಸಬಾರದು’ ಎಂದರು.
‘ಸಮುದಾಯ ಜನರನ್ನು ಬೆಳೆಸುವ ಕಾರ್ಯವಾಗಬೇಕು. ನಾವೆಲ್ಲರೂ ಶಿಕ್ಷಣದೆಡೆ ಸಾಗಿ, ಸಮುದಾಯ ಗಟ್ಟಿಗೊಳಿಸಬೇಕು. ಅಂಬೇಡ್ಕರ್ ನೀಡಿರುವ ಸಂವಿಧಾನದ ಮೇಲೆ ನಮ್ಮ ಭವಿಷ್ಯ ಅಡಗಿದೆ. ಒಂದು ವೇಳೆ ಸಂವಿಧಾನ ಇಲ್ಲದಿದ್ಧರೆ ಬಾವಿಯಲ್ಲಿರುವ ನೀರನ್ನು ಕುಡಿಯಲು ಸಹ ಕೆಲವು ಸಮುದಾಯಗಳು ಬಿಡುತ್ತಿರಲಿಲ್ಲ’ ಎಂದು ಹೇಳಿದರು.
ಶಾಸಕ ಆಸಿಫ್ ಸೇಠ್, ಹಿರಿಯ ಸಾಹಿತಿ ಯು.ರು . ಪಾಟೀಲ, ಜನಪದ ತಜ್ಞ ಜ್ಯೋತಿರ್ಲಿಂಗ ಹೊನಕಟ್ಟಿ, ಕ.ರಾ.ಸ- ಅಭಿವೃದ್ದಿ ಸಂಘದ ಅಧ್ಯಕ್ಷ ಸುಭಾಷ ನೇತ್ರೇಕರ್, ಭೀಮರಾವ್ ಪವಾರ್, ಸಲಹೆಗಾರ ಶಿವಕುಮಾರ್ ದೊಡಮನಿ ಹಾಗೂ ಇತರರು ಇದ್ದರು.
ಸಿನಿಮಾ ನಟರು ಕ್ರೀಡಾಪಟುಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವ ಬದಲು ಬುದ್ಧ ಬಸವ ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರ ಪ್ರೇರಣೆ ಇಂದಿನ ಪೀಳಿಗೆಗೆ ಅವಶ್ಯವಿದೆಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.