
ಶ್ವಾನ ಪ್ರದರ್ಶನ
ಬೆಳಗಾವಿ: ಜಿಲ್ಲಾ ಪಂಚಾಯತ, ಜಿಲ್ಲಾ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಜ.26 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸರ್ದಾರ್ ಮೈದಾನದ ಆವರಣದಲ್ಲಿ "ಬೆಳಗಾವಿ ಶ್ವಾನ (ನಾಯಿ) ಮತ್ತು ಬೆಕ್ಕುಗಳ ಪ್ರದರ್ಶನ-2026"ನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಪ್ರದರ್ಶನದ ಪ್ರಚಾರ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜವಾಬ್ದಾರಿಯುತ ಪ್ರಾಣಿಗಳ ಪಾಲನೆ, ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ವಿಭಿನ್ನ ತಳಿಯ (ಜಾತಿಯ) ನಾಯಿ ಮತ್ತು ಬೆಕ್ಕುಗಳ ಪ್ರದರ್ಶನ, ಫ್ಯಾನ್ಸಿ ಶೋ, ಒಬಿಡಿಯನ್ಸ್ ಶೋ, ಆಜಿಲಿಟಿ ಶೋ, ಪೆಟ್ ಗ್ರೂಮಿಂಗ್ ಸ್ಪರ್ಧೆ, ಪೆಟ್ ಕಾಸ್ಟ್ಯೂಮ್ ಪ್ರದರ್ಶನ ಸೇರಿದಂತೆ ಹಲವು ಆಕರ್ಷಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಾಯಿ ದತ್ತು ಸ್ವೀಕಾರ ಅಭಿಯಾನ, ಪೆಟ್ ಶಾಪ್ ಮತ್ತು ಬ್ರಿಡರ್ ಪರವಾನಗಿ ನೋಂದಣಿ ಕುರಿತು ಮಾಹಿತಿ, ರೇಬಿಸ್ ರೋಗ ಜಾಗೃತಿ, ಬೀದಿ ನಾಯಿ ನಿಯಂತ್ರಣ (ABC) ಕಾರ್ಯಕ್ರಮದ ಅರಿವು ಹಾಗೂ ಪಶುಪಾಲನೆ ಸಂಬಂಧಿತ ತಜ್ಞರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಮಕ್ಕಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳಲ್ಲಿ ಪ್ರಾಣಿಗಳ ಮೇಲಿನ ಪ್ರೀತಿ, ಕಾಳಜಿ, ಸಹಾನುಭೂತಿ ಮತ್ತು ಜವಾಬ್ದಾರಿಯುತ ವರ್ತನೆ ಬೆಳೆಸುವ ಉದ್ದೇಶ ಹೊಂದಿದೆ. ಇದು ಮಕ್ಕಳ ಶಿಕ್ಷಣ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರದರ್ಶನದಲ್ಲಿ ಭಾಗವಹಿಸುವ ಎಲ್ಲಾ ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ಹಾಗೂ ಡಿವರ್ಮಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ತಮ್ಮ ಕುಟುಂಬದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜಿಲ್ಲೆಯ ಎಲ್ಲಾ ನಾಗರಿಕರು, ಶ್ವಾನ ಮತ್ತು ಬೆಕ್ಕುಗಳ ಮಾಲೀಕರು, ವಿದ್ಯಾರ್ಥಿಗಳು ಮತ್ತು ಪ್ರಾಣಿ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ಅಧಕ್ಷ ಡಾ. ವಿಶ್ವನಾಥ್ ಬಂತಿ, ಡಾ. ಆನಂದ್ ಪಾಟೀಲ್, ಡಾ.ಶ್ರೀಕಾಂತ್ ಗಾವಿ, ಡಾ. ವಿನಯ್ ಸಂಗ್ರೋಳೆ, ಡಾ ಮಲ್ಲಿಕಾರ್ಜುನ ಕಟ್ಟೆನ್ನವರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.