ADVERTISEMENT

ಬೆಳಗಾವಿ | ಪತಿ– ಪತ್ನಿ ಜಗಳ: ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ

ಸಾವಿನಲ್ಲಿ ಅಂತ್ಯಕಂಡ , ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:39 IST
Last Updated 27 ಜುಲೈ 2025, 2:39 IST
ಬೆಳಗಾವಿ ತಾಲ್ಲೂಕಿನ ವಾಘವಡೆ ಗ್ರಾಮದ ಕಾರ್ಖಾನೆಯಲ್ಲಿ ತಾಮ್ರದ ತಂತಿ ಕಳವು ಮಾಡಿದ ಆರೋಪಿಗಳನ್ನು ಶನಿವಾರ ಬಂಧಿಸಿದ ಗ್ರಾಮೀಣ ಠಾಣೆ ಪೊಲೀಸರು, ವಾಹನ ಹಾಗೂ ಮಾಲು ವಶಕ್ಕೆ ಪಡೆದರು
ಬೆಳಗಾವಿ ತಾಲ್ಲೂಕಿನ ವಾಘವಡೆ ಗ್ರಾಮದ ಕಾರ್ಖಾನೆಯಲ್ಲಿ ತಾಮ್ರದ ತಂತಿ ಕಳವು ಮಾಡಿದ ಆರೋಪಿಗಳನ್ನು ಶನಿವಾರ ಬಂಧಿಸಿದ ಗ್ರಾಮೀಣ ಠಾಣೆ ಪೊಲೀಸರು, ವಾಹನ ಹಾಗೂ ಮಾಲು ವಶಕ್ಕೆ ಪಡೆದರು   

ಬೆಳಗಾವಿ: ತಾಲ್ಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಕೌಟುಂಬಿಕ ಕಲಹದಲ್ಲಿ, ವ್ಯಕ್ತಿಯೊಬ್ಬರು ಕುಡುಗೋಲಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊನ್ನಿಹಾಳ‌ದ ಮಲ್ಲಪ್ಪ ಕಟಬುಗೋಳ (35) ಸಾವಿಗೀಡಾದವರು. ಸಾರಾಯಿ ದಾಸರಾಗಿದ್ದ ಮಲ್ಲಪ್ಪ ಹಾಗೂ ಪತ್ನಿ ರೇಖಾ ಮಧ್ಯೆ ಪದೇಪದೇ ಜಗಳ ನಡೆಯುತ್ತಿತ್ತು. ಶುಕ್ರವಾರ ಕೂಡ ಮನೆಯಲ್ಲಿದ್ದ ಅಕ್ಕಿ ಮಾರಿಕೊಂಡು, ಸಾರಾಯಿ ಕುಡಿದು ಬಂದಿದ್ದ ಮಲ್ಲಪ್ಪ ತಂಟೆ ತೆಗೆದರು.

‘ಈ ವೇಳೆ ರೇಖಾ ಅವರ ಸಹೋದರ ಮಲ್ಲಿಕಾರ್ಜುನ ತಂಟೆ ಬಿಡಿಸಲು ಬಂದರು. ಮಾತಿಗೆ ಮಾತು ಬೆಳೆದು ಭಾವ– ಭಾಮೈದನ ಜಗಳ ಕೈಕೈ ಮುಲಾಯಿಸುವ ಹಂತಕ್ಕೆ ಹೋಯಿತು. ಬೇಸರಗೊಂಡ ಮಲ್ಲಪ್ಪ ಮನೆಯಲ್ಲಿದ್ದ ಕುಡಗೋಲು ತೋರಿಸಿ ತನ್ನ ಕತ್ತು ತಾನೇ ಕೊಯ್ದುಕೊಂಡು ಸಾಯುವುದಾಗಿ ಬೆದರಿಕೆ ಹಾಕಿದ. ಆಗಲೂ ಜಗಳ ಮುಂದುವರಿದಾಗ ಕತ್ತು ಕೊಯ್ದುಕೊಂಡ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಸುನೀಗಿದ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಮಲ್ಲಿಕಾರ್ಜುನ ಪರಾರಿಯಾಗಿದ್ದು, ಮಾರಿಹಾಳ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.

ಐವರ ಬಂಧನ: 

ನಗರದ ವಿವಿಧೆಡೆ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಹೆರಾಯಿನ್ ಮತ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಐವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. 29 ಗ್ರಾಂ ಹೆರಾಯಿನ್‌ ಸೇರಿ ₹75 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಂದೂರಗಲ್ಲಿ ನಿವಾಸಿ ವಿಶ್ವನಾಥ ಗೊಟಡಕಿ (28), ಮಾರಾಠಾ ಗಲ್ಲಿಯ ಮಯೂರ ರಾವುತ್‌ (31), ಉಜ್ವಲ ನಗರದ ವಕಾರ ಅಹ್ಮದ್‌ ರಫೀಕ್‌ ನಾಯಕವಾಡಿ (30), ರೋಷನ್‌ ಜಮೀರ್‌ ಮುಲ್ಲಾ (25) ಹಾಗೂ ಕಪೀಲತೀರ್ಥ ಗಲ್ಲಿಯ ರಾಹುಲ್‌ ಜಾಲಗಾರ (28) ಬಂಧಿತರು.

ಮಾರ್ಕೆಟ್‌ ಠಾಣೆ ಹಾಗೂ ಖಡೇಬಜಾರ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ತಾಮ್ರದ ತಂತಿ ಕಳವು: ಐವರ ಬಂಧನ

ಬೆಳಗಾವಿ: ತಾಲ್ಲೂಕಿನ ವಾಘವಡೆ ಗ್ರಾಮದ ಕಾರ್ಖಾನೆಯಲ್ಲಿನ ತಾಮ್ರದ ತಂತಿ ಕಳ್ಳತನ ಮಾಡಿದ ಐವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಗೂಡ್ಸ್‌ ವಾಹನ ಸೇರಿದಂತೆ ಒಟ್ಟು ₹3.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಕಂಡೇಯ ನಗರದ ರಮೇಶ ನಾಗಪ್ಪ ಧೂಳಪ್ಪಗೋಳ (22) ನಾವಗೆ ಗ್ರಾಮದ ಸಂತೋಷ ಗಣೇಶ ನಾಯಕ (32) ಲಗಮಪ್ಪ ಬಸಪ್ಪ ಯರಗಾಣೆ (25) ಸೋಮಯ್ಯ ಅಡವಯ್ಯ ಹಿರೇಮಠ (23) ಹಾಗೂ ಪ್ರಜ್ವಲ್‌ ವಿರೂಪಾಕ್ಷಿ ಕಂಬಿ (21) ಬಂಧಿತರು. ಸಿಪಿಐ ನಾಗನಗೌಡ ಕಟ್ಟಿಮನಿಗೌಡ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.