ಬೆಳಗಾವಿ: ಇಲ್ಲಿನ ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಮಚ್ಛೆಯ ಆಕಾಶ ದೊಡಮನಿ, ನಿಖಿಲ್ ಸೋಮಜಿಚೆ, ವೀರೇಶ ಹಿರೇಮಠ ಬಂಧಿತರು. ಅವರಿಂದ ₹6.90 ಲಕ್ಷ ಮೌಲ್ಯದ 23.84 ಕೆ.ಜಿ ಗಾಂಜಾ, ₹3 ಲಕ್ಷ ಮೌಲ್ಯದ ಕಾರು, ₹2 ಸಾವಿರ ಮೌಲ್ಯದ ಎರಡು ಮೊಬೈಲ್ ಮತ್ತು ₹1,100 ನಗದು ವಶಕ್ಕೆ ಪಡೆಯಲಾಗಿದೆ.
‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2023ರಲ್ಲಿ 23 ದಾಳಿ ನಡೆಸಿ 12 ಕೆ.ಜಿ ಮತ್ತು 2024ರಲ್ಲಿ 25 ದಾಳಿ ನಡೆಸಿ 11 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದೆವು. ಆದರೆ, ಉದ್ಯಮಬಾಗ್ ಇನ್‌ಸ್ಪೆಕ್ಟರ್ ಡಿ.ಕೆ.ಪಾಟೀಲ ನೇತೃತ್ವದ ತಂಡ ಇದೊಂದೇ ಪ್ರಕರಣದಲ್ಲಿ 23 ಕೆ.ಜಿಗಿಂತ ಹೆಚ್ಚಿನ ಗಾಂಜಾ ವಶಕ್ಕೆ ಪಡೆದಿದೆ. ಇತ್ತೀಚಿನ ವರ್ಷಗಳಲ್ಲೇ ನಡೆದ ದೊಡ್ಡ ದಾಳಿ ಇದಾಗಿದೆ’ ಎಂದು ಪೊಲೀಸ್ ಕಮಿಷನರ್ ಭೂಷಣ ಬೊರಸೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಹಾರಾಷ್ಟ್ರದಿಂದ ಬರುತ್ತಿದ್ದ ಗಾಂಜಾ ಈ ಆರೋಪಿಗಳ ಮೂಲಕ ಇಡೀ ನಗರಕ್ಕೆ ಪೂರೈಕೆಯಾಗುತ್ತಿತ್ತು. ಕಾಲೇಜು ವಿದ್ಯಾರ್ಥಿಗಳೇ ಅವರ ಟಾರ್ಗೆಟ್ ಆಗಿದ್ದರು ಎಂಬ ಸುಳಿವು ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿದೆ. ಹೆಚ್ಚಿನ ಮಾಹಿತಿ ಕಲೆಹಾಕಲು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.
‘ಮಾದಕವಸ್ತುಗಳ ಹಾವಳಿಯಿಂದ ದೂರ ಇರುವ ಕುರಿತಾಗಿ ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಪ್ರತಿ ಕಾಲೇಜಿನಲ್ಲಿ ‘ಆ್ಯಂಟಿ ಡ್ರಗ್ ಕಮಿಟಿ’ ರಚಿಸುವಂತೆಯೂ ತಿಳಿಸುತ್ತೇವೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಯುವಜನರು ಹೆಚ್ಚಾಗಿ ಮಾದಕವಸ್ತು ಸೇವಿಸುತ್ತಿದ್ದಾರೆ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಆರೋಗ್ಯ, ವರ್ತನೆ ಮೇಲೆ ನಿಗಾ ಇರಿಸಬೇಕು. ನಗರದಲ್ಲಿ ಯಾವುದೇ ಸ್ಥಳದಲ್ಲಿ ಮಾದಕವಸ್ತು ಮಾರುತ್ತಿರುವುದು ಕಂಡುಬಂದರೆ ಸಾರ್ವಜನಿಕರು ನಮಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.
‘2025ರಲ್ಲಿ ಜುಲೈ 20ರವರೆಗೆ 21 ದಾಳಿ ನಡೆಸಿ 45 ಆರೋಪಿಗಳನ್ನು ಬಂಧಿಸಿದ್ದು, 40 ಕೆ.ಜಿ ಮಾದಕವಸ್ತು ವಶಕ್ಕೆ ಪಡೆದಿದ್ದೇವೆ. ಗಾಂಜಾ ಸಾಗಿಸುವವರು, ಮಾರುವವರು ಮಾತ್ರವಲ್ಲ; ಸೇವಿಸುವವರನ್ನೂ ಬಂಧಿಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.