ADVERTISEMENT

ರಾಷ್ಟ್ರಪ್ರೇಮಕ್ಕಾಗಿ ದೌಡ್‌ ಬರ್‍..ರಿ ನವರಾತ್ರಿ ಅಂಗವಾಗಿ ದುರ್ಗಾಮಾತಾ ದೌಡ್‌

ಸಂತೋಷ ಈ.ಚಿನಗುಡಿ
Published 26 ಸೆಪ್ಟೆಂಬರ್ 2022, 4:16 IST
Last Updated 26 ಸೆಪ್ಟೆಂಬರ್ 2022, 4:16 IST
ಬೆಳಗಾವಿಯ ದುರ್ಗಾಮಾತಾ ದೌಡ್ (ಸಂಗ್ರಹ ಚಿತ್ರ)
ಬೆಳಗಾವಿಯ ದುರ್ಗಾಮಾತಾ ದೌಡ್ (ಸಂಗ್ರಹ ಚಿತ್ರ)   

ಬೆಳಗಾವಿ: ತಲೆಗೆ ಕೇಸರಿ ಮುಂಡಾಸು, ಸೊಂಟಕ್ಕೆ ಹಳದಿ ಶಾಲು, ಕೊರಳಲ್ಲಿ ಪುಷ್ಪಮಾಲೆ, ಶ್ವೇತವಸ್ತ್ರ ಧರಿಸಿಕೊಂಡ ಅವರೆಲ್ಲ ಪರಂಪರೆಯ ಸಿಪಾಯಿಗಳು. ದುರ್ಗಾಮಾತಾ ಕಿ ಜೈ, ಜೈ ಶಿವಾಜಿ– ಜೈ ಭವಾನಿ ಎಂದು ಘೋಷಣೆ ಹಾಕುತ್ತ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದು ಓಡುತ್ತಿದ್ದರೆ ಅವರೆಲ್ಲ ಮ್ಯಾರಥಾನ್‌ ಪಟುಗಳನ್ನೂ ನಾಚಿಸುತ್ತಾರೆ.

ಕನ್ನಡ– ಮರಾಠಿ ಸಂಸ್ಕೃತಿ– ಸಂ‍ಪ್ರದಾಯಗಳ ಕೂಡಲಸಂಗಮ ‘ದುರ್ಗಾಮಾತಾ ದೌಡ್‌’. ನವರಾತ್ರಿಯ ವಿಶಿಷ್ಟ ಆಚರಣೆ. ಭಾಷೆ, ಜಾತಿ, ಪ್ರದೇಶದ ಬಿಗುಮಾನವಿಲ್ಲದೇ ಎಲ್ಲರೂ ಪಾಲ್ಗೊಳ್ಳಲು ಬರುವ ಸದವಕಾಶ.

ಈ ಬಾರಿ ದೌಡ್‌ ಸೆ. 26ರಂದು ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ. ನಗರದ ಛತ್ರಪತಿ ಶಿವಾಜಿ ಉದ್ಯಾನದ ಬಳಿ ದುರ್ಗೆಗೆ ಪೂಜೆ ಸಲ್ಲಿಸುವ ಮೂಲಕ ನಾಯಕರು ಓಟಕ್ಕೆ ಚಾಲನೆ ನೀಡುವರು. ಕೇಸರಿ ಧ್ವಜಗಳನ್ನು ಎತ್ತಿ ಹಿಡಿದು ಓಡುವ ಯುವಕ– ಯುವತಿಯರ ಹುಮ್ಮಸ್ಸು ನೋಡುವುದೇ ಸೊಗಸು.

ADVERTISEMENT

ದಿನವೂ 7ರಿಂದ 14 ಕಿ.ಮೀ ಓಟ: ಸೋಮವಾರ ಬೆಳಿಗ್ಗೆ ಆರಂಭವಾಗುವ ದೌಡ್‌ ಶಿವಾಜಿ ಉದ್ಯಾನದಿಂದ, ಹುಲಬತ್ತಿ ಕಾಲೊನಿ ರಸ್ತೆ, ಮಹಾತ್ಮ ಫುಲೆ ರಸ್ತೆ, ಎಸ್‌ಪಿಎಂ ರಸ್ತೆ, ಪಾಟಿದಾರ್‌ ಭವನ, ಗೂಡ್ಸ್‌ ಶೆಡ್‌ ರಸ್ತೆ, ಕಪಿಲೇಶ್ವರ ಕಾಲೊನಿ, ಶಾಸ್ತ್ರಿ ನಗರ, ಅಟ್ಲೆ ರೋಡ್, ಮಹಾದ್ವಾರ ರಸ್ತೆ, ಮಾಣಿಕಭಾಗ ರಸ್ತೆ, ಸಮರ್ಥ ನಗರ, ಸಂಭಾಜಿ ಗಲ್ಲಿ ಮೂಲಕ ಹಾದು ಮತ್ತೆ ಎಸ್‌ಪಿಎಂ ಮಾರ್ಗವಾಗಿ ಕಪಿಲೇಶ್ವರ ಮಂದಿರಕ್ಕೆ ಬಂದು ಸಮಾಪನಗೊಳ್ಳಲಿದೆ.

*

ದೇಶಪ್ರೇಮಕ್ಕೆ ಪುಟಿದ ಚೈತನ್ಯ

1999ರಲ್ಲಿ ಮಹರಾಷ್ಟ್ರದ ಸಾಂಗ್ಲಿ ನಗರದಲ್ಲಿ ಸಂಬಾಜಿರಾವ್‌ ಬಿಡೆ ಎನ್ನುವ ಹಿಂದೂ ಮುಖಂಡ ಈ ಓಟ ಆರಂಭಿಸಿದರು. ಪ್ರತಿ ವರ್ಷ ನವರಾತ್ರಿಯ ಒಂಬತ್ತು ದಿನಗಳಕಾಲ ಎಲ್ಲರೂ ಒಂದಾಗಿ ಓಡಿ, ರಾಷ್ಟ್ರಪ್ರೇಮ ಮೆರೆಯಬೇಕು ಎಂದು ಕರೆ ನೀಡಿದರು. 24 ವರ್ಷಗಳಿಂದ ಬೆಳಗಾವಿ ನಗರದಲ್ಲೂ ಇದು ಮುಂದುವರಿದಿದೆ. ಈಗೀಗ ಜಿಲ್ಲೆಯ ಎಲ್ಲ ಪಟ್ಟಣ ಹಳ್ಳಿಗಳಿಗೂ ವಿಸ್ತರಣೆಯಾಗಿದೆ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ಗಾವಡೆ ಅವರ ವಿವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.