ADVERTISEMENT

ಬೆಳಗಾವಿ– ಗೋವಾ ಹೆದ್ದಾರಿ ವಿಸ್ತರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:15 IST
Last Updated 18 ಡಿಸೆಂಬರ್ 2018, 14:15 IST

ಬೆಳಗಾವಿ: ಬೆಳಗಾವಿಯಿಂದ ಗೋವಾದ ಅನಮೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 4ಎ ವಿಸ್ತರಣೆ ಮಾಡಲು ಸಾವಿರಾರು ಮರಗಳ ಹನನ ಮಾಡಲಾಗುತ್ತಿದೆ. ಕಾಡು ನಾಶವಾದರೆ ನಾಡು ಉಳಿಯಲು ಸಾಧ್ಯವಿಲ್ಲ. ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪರಿಸರವಾದಿ ಸುರೇಶ ಹೆಬ್ಳಿಕರ್‌ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಹೆದ್ದಾರಿಯು ಪಶ್ಚಿಮ ಘಟ್ಟದ ಮೂಲಕ ಹಾದುಹೋಗಲಿದೆ. 14 ಮೀಟರ್‌ ಅಗಲವಿರುವ ಹೆದ್ದಾರಿಯನ್ನು 26 ಮೀಟರ್‌ ವರೆಗೆ ವಿಸ್ತರಣೆ ಮಾಡಲು ಸಾವಿರಾರು ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂದು ಹೇಳಿದರು.

ಹೆದ್ದಾರಿಯ ವಿಸ್ತರಣೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಅದನ್ನು ಇನ್ನೂ ವಿಚಾರಣೆಗೆ ಬಂದಿಲ್ಲ. ಇತ್ತ ಅಧಿಕಾರಿಗಳು ಲಗುಬಗೆಯಿಂದ ಮರಗಳನ್ನು ಕತ್ತರಿಸಲು ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಕಾಮಗಾರಿಗೆ ತಡೆನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪರಿಸರ, ಕಾಡಿನ ಮಹತ್ವದ ಬಗ್ಗೆ ಸರ್ಕಾರದಲ್ಲಿ ಇರುವವರೆಗೆ ಕಾಳಜಿ ಇಲ್ಲ. ಮತ ಗಳಿಕೆಗೋಸ್ಕರ ಪರಿಸರಕ್ಕೆ ಮಾರಕವಾಗುವಂತಹ ಯೋಜನೆಗಳಿಗೆ ಅನುಮತಿ ನೀಡುತ್ತಿದ್ದಾರೆ. ಸ್ಥಳೀಯ ಜನರಲ್ಲಿ ಪರಿಸರ ಜಾಗೃತಿ ಮೂಡಿದರೆ ಮಾತ್ರ ಇಂತಹ ಯೋಜನೆಗಳಿಗೆ ತಡೆಯೊಡ್ಡಲು ಸಾಧ್ಯ ಎಂದು ತಿಳಿಸಿದರು.

ಪ್ರತಿ ದಿನ 10,000ಕ್ಕಿಂತ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದರೆ ಮಾತ್ರ ಚತುಷ್ಪಥ ಹೆದ್ದಾರಿ ಮಾಡಬೇಕೆಂಬ ನಿಯಮವಿದೆ. ಆದರೆ ಬೆಳಗಾವಿ– ಗೋವಾ ಮಾರ್ಗದ ನಡುವೆ ಇಷ್ಟೊಂದು ವಾಹನಗಳು ಸಂಚರಿಸುವುದಿಲ್ಲ. ಆದರೂ, ಏಕೆ ವಿಸ್ತರಣೆ ಮಾಡಲಾಗುತ್ತಿದೆ. ಇದರ ಹಿಂದೆ ಕೆಲವು ಜನಪ್ರತಿನಿಧಿಗಳ ಹಿತಾಸಕ್ತಿ ಅಡಗಿದೆ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡಲು ಸರ್ಕಾರವು ₹ 50,000 ಕೋಟಿ ವಿನಿಯೋಗಿಸುತ್ತಿದೆ. ಇದರ ಬದಲು ಜನರಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ ನೀಡಲು ಅಥವಾ ಉದ್ಯೋಗಾವಕಾಶ ಸೃಷ್ಟಿ ಮಾಡಲು ಬಳಸಬಹುದಿತ್ತು ಎಂದು ಸಲಹೆ ನೀಡಿದರು.

ಜ.5ರಂದು ಪ್ರತಿಭಟನೆ

ಬೆಳಗಾವಿ– ಅನಮೋಡ್‌ (ಗೋವಾ) ಸೇರಿದಂತೆ ಮೈಸೂರು– ಕೊಡಗು, ಮಂಗಳೂರು– ಕಾರವಾರ, ಹಾವೇರಿ– ಶಿರಸಿ, ಹುಬ್ಬಳ್ಳಿ– ಅಂಕೋಲಾ ಹೆದ್ದಾರಿಗಳ ವಿಸ್ತರಣೆ ವಿರೋಧಿಸಿ ಜನವರಿ 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಮೃತ ಚರಂತಿಮಠ, ಪಿ.ವಿ. ಹಿರೇಮಠ, ಸಚಿನ ಪಾಟೀಲ, ಉಲ್ಲಾಸಕುಮಾರ, ಜೋಸೆಫ್‌ ಹೂವರ್‌ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.