ADVERTISEMENT

ಬೆಳಗಾವಿ | ಮಳೆಯಿಂದಾಗಿ ಹೆಸ್ಕಾಂಗೆ ₹29 ಲಕ್ಷ ನಷ್ಟ

ಜಿಲ್ಲೆಯಲ್ಲಿ 47 ವಿದ್ಯುತ್‌ ಕಂಬಗಳಿಗೆ ಹಾನಿ: ಧರೆಗುರುಳಿದ 25 ಮರ

​ಪ್ರಜಾವಾಣಿ ವಾರ್ತೆ
Published 25 ಮೇ 2023, 5:17 IST
Last Updated 25 ಮೇ 2023, 5:17 IST
ಬೆಳಗಾವಿಯ ಹೆಸ್ಕಾಂ ಕಚೇರಿ ಆವರಣದಲ್ಲಿ ಧರೆಗುರುಳಿದ ವಿದ್ಯುತ್‌ ಕಂಬ ದುರಸ್ತಿ ಮಾಡಿದ ಸಿಬ್ಬಂದಿ                       /ಪ್ರಜಾವಾಣಿ ಚಿತ್ರ
ಬೆಳಗಾವಿಯ ಹೆಸ್ಕಾಂ ಕಚೇರಿ ಆವರಣದಲ್ಲಿ ಧರೆಗುರುಳಿದ ವಿದ್ಯುತ್‌ ಕಂಬ ದುರಸ್ತಿ ಮಾಡಿದ ಸಿಬ್ಬಂದಿ                       /ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಮಳೆ ಹಾಗೂ ರಭಸದಿಂದ ಬೀಸಿದ ಗಾಳಿ ಹಲವು ಅವಾಂತರ ಸೃಷ್ಟಿಸಿವೆ. 47 ವಿದ್ಯುತ್‌ ಕಂಬಗಳು, 8 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದ್ದು, ಹೆಸ್ಕಾಂಗೆ ₹29 ಲಕ್ಷ ನಷ್ಟವಾಗಿದೆ.

ಇಲ್ಲಿನ ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಹನುಮಾನ ನಗರ, ರಾಮತೀರ್ಥ ನಗರ, ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮುಂಭಾಗದ ರಸ್ತೆ, ಶಹಾಪುರದ ಸರಾಫ್‌ ಗಲ್ಲಿ, ಯಳ್ಳೂರ ರಸ್ತೆ ಮತ್ತಿತರ ಕಡೆ ವಿದ್ಯುತ್‌ ಕಂಬಗಳು ಮತ್ತು ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದ್ದು, ಸೋಮವಾರ ರಾತ್ರಿಯಿಂದಲೇ ದುರಸ್ತಿ ಕಾಮಗಾರಿ ಆರಂಭವಾಗಿವೆ. ಬುಧವಾರವೂ ಅಲ್ಲಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದು ಕಂಡುಬಂತು.

‘ಮಳೆ, ಗಾಳಿಯಿಂದಾಗಿ ಹಾನಿಗೀಡಾದ ವಿದ್ಯುತ್‌ ಪರಿಕರಗಳನ್ನು ದುರಸ್ತಿ ಮಾಡಿದ್ದೇವೆ. ಅಪಾಯಕಾರಿ ಹಂತದಲ್ಲಿರುವ ವಿದ್ಯುತ್‌ ಕಂಬ ತೆರವುಗೊಳಿಸಿದ್ದೇವೆ. ಮಳೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿದರೂ ತ್ವರಿತವಾಗಿ ಕಾರ್ಯಾಚರಣೆ ಕೈಗೊಳ್ಳಲು ಸಜ್ಜಾಗಿದ್ದೇವೆ. ಇದಕ್ಕಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದು ಹೆಸ್ಕಾಂ ಬೆಳಗಾವಿ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿನೋದ ಕರೂರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೆಳಗಾವಿಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ 20–25 ಮರಗಳು ಬಿದ್ದಿವೆ. ಅರಣ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಯಾವುದೇ ಪ್ರದೇಶದಲ್ಲಿ ಅಪಾಯಕಾರಿ ಮರಗಳಿದ್ದರೆ ಸಾರ್ವಜನಿಕರು  ನಮಗೆ ಮಾಹಿತಿ ನೀಡಬೇಕು. ತ್ವರಿತವಾಗಿ ಅವುಗಳನ್ನು ಕತ್ತರಿಸಿ, ಜನರಿಗೆ ಯಾವ ತೊಂದರೆಯಾಗದಂತೆ ಕ್ರಮ ಜರುಗಿಸುತ್ತೇವೆ’ ಎಂದು ಬೆಳಗಾವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಹೇಳಿದರು.

‘ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮುಂಭಾಗದ ರಸ್ತೆಯಲ್ಲಿ ನಮ್ಮ ಹಲವು ಅಂಗಡಿ–ಮುಂಗಟ್ಟುಗಳಿವೆ. ಸೋಮವಾರ ರಾತ್ರಿ ಬಿರುಗಾಳಿ‌ ಸಹಿತವಾಗಿ ಭಾರಿ‌ ಮಳೆ ಸುರಿದು, ಮರ ಬಿದ್ದಿದ್ದರಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿತ್ತು. ವಿದ್ಯುತ್‌ ತಂತಿಗಳು ಹರಿದುಬಿದ್ದವು. ಹೆಸ್ಕಾಂ ಸಿಬ್ಬಂದಿ ಎರಡು ದಿನಗಳಿಂದ ದುರಸ್ತಿ ಕಾಮಗಾರಿ ಕೈಗೊಂಡಿದ್ದರಿಂದ ಈಗ ವಿದ್ಯುತ್‌ ಸಂಪರ್ಕ ಆರಂಭಗೊಂಡಿದೆ. ಪ್ರತಿಬಾರಿ ಮಳೆಗಾಲದಲ್ಲೂ ಇಂತಹ ಸಮಸ್ಯೆ ನಮ್ಮನ್ನು ಕಾಡುತ್ತಲೇ ಇದೆ. ಹಾಗಾಗಿ ಅಪಾಯಕಾರಿ ಹಂತದಲ್ಲಿರುವ ಮರಗಳನ್ನು ಕತ್ತರಿಸಿ, ವಿದ್ಯುತ್‌ ಸೌಕರ್ಯಕ್ಕೆ ಹಾನಿಯಾಗದಂತೆ ಕ್ರಮ ವಹಿಸಬೇಕು’ ಎಂದು ಗ್ಯಾರೇಜ್‌ವೊಂದರ ಮಾಲೀಕ ಆಸೀಫ್‌ ರೋಟಿವಾಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾನಿಗೀಡಾದ ವಿದ್ಯುತ್‌ ಕಂಬದ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು                                                  /ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.