ADVERTISEMENT

ರಾಜ್ಯೋತ್ಸವಕ್ಕೆ ಗಡಿ ನಾಡು ಸಜ್ಜು: ಪುನೀತ್ ರಾಜ್‌ಕುಮಾರ್‌ ಗೌರವಾರ್ಥ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 12:41 IST
Last Updated 31 ಅಕ್ಟೋಬರ್ 2021, 12:41 IST
ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬೆಳಗಾವಿಯ ಸಿಪಿಇಡಿ ಕಾಲೇಜು ಮೈದಾನದಲ್ಲಿ ಪೆಂಡಾಲ್ ಹಾಕಲಾಗಿದೆಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬೆಳಗಾವಿಯ ಸಿಪಿಇಡಿ ಕಾಲೇಜು ಮೈದಾನದಲ್ಲಿ ಪೆಂಡಾಲ್ ಹಾಕಲಾಗಿದೆಪ್ರಜಾವಾಣಿ ಚಿತ್ರ   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಗಡಿ ನಾಡು ಕುಂದಾನಗರಿ ಸಜ್ಜಾಗಿದೆ.

ಕೋವಿಡ್ ಭೀತಿ ಮತ್ತು ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಆದರೆ, ಸಂಭ್ರಮ–ಸಡಗರಕ್ಕೆ ಕುಂದಾಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ನಗರದ ಸಿಪಿಇಡಿ ಮೈದಾನದಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರ (ನ.1) ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಧ್ವಜಾರೋಹಣ ನೆರವೇರಿಸುವರು. ಸಚಿವರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತ, ಜಿಲ್ಲಾಧಿಕಾರಿ ಕಚೇರಿ ಬಳಿಯ ಆವರಣ, ಸಿಪಿಇಡಿ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಕ್ಲಬ್ ರಸ್ತೆ ಸೇರಿದಂತೆ ನಗರದಾದ್ಯಂದ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಚನ್ನಮ್ಮ ವೃತ್ತವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಸುತ್ತಲೂ ಕನ್ನಡ ಬಾವುಟದ ಬಣ್ಣದ ಬಟ್ಟೆಗಳಿಂದ ಸಿದ್ಧಪಡಿಸಿದ ಸ್ವಾಗತ ಕಮಾನುಗಳು ಗಮನಸೆಳೆಯುತ್ತಿವೆ. ವಿದ್ಯುತ್‌ದೀಪಾಲಂಕಾರವನ್ನೂ ಮಾಡಲಾಗಿದೆ.

ADVERTISEMENT

‘ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೋವಿಡ್ ಭೀತಿ ಕಡಿಮೆಯಾಗಿದೆ. ಹೀಗಾಗಿ, ಸರ್ಕಾರ ಅನುಮತಿ ಕೊಡಲಿ ಅಥವಾ ಕೊಡದಿರಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗುವುದು; ಮೆರವಣಿಗೆಯನ್ನೂ ನಡೆಸಲಾಗುವುದು. ಸ್ತಬ್ಧಚಿತ್ರಗಳು ಹಾಗೂ ರೂಪಕಗಳು ಕೂಡ ಮೆರವಣಿಗೆಯಲ್ಲಿ ಭಾಗವಹಿಸಲಿವೆ’ ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರಕಟಿಸಿದ್ದರು. ಆದರೆ, ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಮಾಡುವುದಾಗಿ ತಿಳಿಸಿದ್ದಾರೆ. ಅದ್ಧೂರಿ ಮೆರವಣಿಗೆ ಬದಲಿಗೆ, ಕನ್ನಡ ತಾಯಿ ಭುವನೇಶ್ವರಿ ಫೋಟೊಗೆ ಪೂಜೆ ಸಲ್ಲಿಸಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಲ್ಲಲ್ಲಿ, ವಿವಿಧ ಸಂಘಟನೆಗಳವರು ಮುನ್ನಾದಿನವಾದ ಭಾನುವಾರ ಕನ್ನಡ ಬಾವುಟಗಳನ್ನು ಕಟ್ಟಿದ್ದು ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯಾದ್ಯಂತ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮಗಳು ನಡೆಯಲಿವೆ. ಸಂಘ–ಸಂಸ್ಥೆಗಳು, ಶಾಲಾ–ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.