ADVERTISEMENT

ಬೆಳಗಾವಿ | ಮತ್ತೆ ಮಳೆಯಾಗಿದೆ: ಸೇತುವೆ ಮುಳುಗಿದೆ

ಸಂತೋಷ ಈ.ಚಿನಗುಡಿ
Published 23 ಜೂನ್ 2025, 5:07 IST
Last Updated 23 ಜೂನ್ 2025, 5:07 IST
ಖಾನಾಪುರ ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ
ಖಾನಾಪುರ ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ   

ಬೆಳಗಾವಿ: ಮತ್ತೆ ಮಳೆಗಾಲ ಬಂದಿದೆ, ಮತ್ತೆ ಅತಿವೃಷ್ಟಿ ಭೀತಿ, ಮತ್ತದೇ ಪ್ರವಾಹದ ಆತಂಕ, ಸೇತುವೆಗಳು ಮುಳುಗುವ ಪರಿಸ್ಥಿತಿ, ಜೀವಗಳು ಹಾನಿಯಾಗುವ ದಿನಗಳು ಮರಳಿ ಬಂದಿವೆ.

ಹಲವು ವರ್ಷಗಳಿಂದಲೂ ಸೇತುವೆ ಮುಳುಗಡೆಯಿಂದ ಗ್ರಾಮಗಳು ಸಂಪರ್ಕ ಕಳೆದುಕೊಳ್ಳುವ, ಜೀವ ಹಾನಿಯಾಗುವಂಥ ಘಟನೆಗಳು ಮರಳುತ್ತಲೇ ಇವೆ. ಸರ್ಕಾರ ಪರಿಹಾರ ಧನ ನೀಡುತ್ತ ಸಾಗಿದೆಯೇ ಹೊರತು; ಇದಕ್ಕೆ ಪರಿಹಾರ ಮಾರ್ಗ ಕಂಡುಕೊಂಡಿಲ್ಲ.

ಜಿಲ್ಲೆಯಲ್ಲಿ ಮೂರು ದೊಡ್ಡ ನದಿಗಳು ನಾಲ್ಕು ಉಪನದಿಗಳು ಹರಿಯುತ್ತವೆ. 21 ಬೃಹತ್‌ ಹಳ್ಳಗಳು ಹರಿಯುತ್ತವೆ. ಈ ಎಲ್ಲದಕ್ಕೂ 333 ಸೇತುವೆಗಳನ್ನು ಕಟ್ಟಲಾಗಿದೆ. ಪ್ರಾದೇಶಿಕವಾಗಿ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ನದಿಗಳ– ಹಳ್ಳ– ಕೊಳ್ಳಗಳ ಹರಿವು ಕೂಡ ದೊಡ್ಡದು. ಅದಕ್ಕೆ ತಕ್ಕಂತೆ ಸೇತುವೆಗಳ ಸಂಖ್ಯೆಯೂ ದೊಡ್ಡದು.

ADVERTISEMENT

ಮಲೆನಾಡ ಸೆರಗಿನ ಕೂಸಾದ ಬೆಳಗಾವಿಯಲ್ಲಿ ಮಳೆಯೂ ಹೆಚ್ಚು. ಅದರೊಂದಿಗೆ ಮುಳುಗಡೆಯಾಗುವ ಸೇತುವೆಗಳ ಸಂಖ್ಯೆಯೂ ದೊಡ್ಡದು. 333ರಲ್ಲಿ ಸುಮಾರು 160ಕ್ಕೂ ಹೆಚ್ಚು ಸೇತುವೆಗಳು ಪ್ರತಿ ವರ್ಷ ಮಳೆಗಾಲದಲ್ಲಿ ಮುಳುಗಡೆ ಆಗುತ್ತವೆ.

ಮಕ್ಕಳ ಜೀವ ಬಲಿ ಪಡೆದ ಹಳ್ಳ: ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ಈಚೆಗೆ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಅಗ್ರಾಣಿ ಹಳ್ಳವನ್ನು ಎತ್ತಿನ ಬಂಡಿಯಲ್ಲಿ ದಾಟುವಾಗ, ನಾಗನೂರ ಪಿಎ ಗ್ರಾಮದ ಸಹೋದರರಾದ ದೀಪಕ ಕಾಂಬಳೆ (9), ಗಣೇಶ ಕಾಂಬಳೆ (7) ಮೃತಪಟ್ಟರು. ಜತೆಗೆ ಒಂದು ಎತ್ತು ಮೃತಪಟ್ಟಿತು. ದುಡಿದು ಬದುಕುತ್ತಿದ್ದ ರೈತನ ಕುಟುಂಬ ಮಕ್ಕಳನ್ನು ಕಳೆದದುಕೊಂಡು ಕಂಗಾಲಾಗಿದೆ. ಈ ಘಟನೆಗೆ ಉತ್ತರ ಕೊಡುವವರು ಯಾರು? ಹೋದ ಜೀವಗಳಿಗೆ ಹೊಣೆ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಪ್ರಕೃತಿ ವಿಕೋಪ ಪರಿಹಾರದಡಿ ಸರ್ಕಾರ ನೀಡುವ ಚಿಲ್ಲರೆ ಹಣ ರೈತನ ಬದುಕನ್ನು ಮತ್ತೆ ಕಟ್ಟಿಕೊಡುವುದಿಲ್ಲ. 

ಹಾಗಾದರೆ, ಪರಿಹಾರ ಏನು? ಇಂಥ ಅಪಾಯಕಾರಿ ಹಳ್ಳಗಳಿಗೆ ಎತ್ತರದ ಸೇತುವೆ ಕಟ್ಟಿದರೆ ಸಾಕು. ಸಾವುಗಳನ್ನು ತಡೆಯಬಹುದು ಎಂಬುದು ಜನಧ್ವನಿ.

ಮತ್ತೆ ಮುಳುಗುತ್ತಿವೆ ಸೇತುವೆ: ಕೃಷ್ಣಾ ಹಾಗೂ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಂತೂ ಆರಂಭದ ಮಳೆಗೇ ಉಕ್ಕೇರುತ್ತವೆ. ಕಳೆದೊಂದು ವಾರ ಸುರಿದ ಮಳೆಯಿಂದಾಗಿ ಚಿಕ್ಕೋಡಿ ಉಪ ವಿಭಾಗದ ಕಲ್ಲೋಳ– ಯಡೂರ, ಮಲಿಕವಾಡ– ದತ್ತವಾಡ, ಬಾರವಾಡ– ಕುನ್ನೂರ, ಕಾರದಗಾ– ಭೋಜ ನಡುವಿನ 4 ಸೇತುವೆಗಳು ಜಲಾವೃತವಾದವು. ವಾರದ ಬಳಿಕವೂ ಸೇತುವೆಗಳು ಸಂಚಾರಕ್ಕೆ ತೆರೆದುಕೊಂಡಿಲ್ಲ. ಇದರಿಂದ ಗ್ರಾಮಗಳು ಮಾತ್ರವಲ್ಲ; ಕರ್ನಾಟಕ– ಮಹಾರಾಷ್ಟ್ರ ನಡುವಿನ ಗಡಿ ಸಂಚಾರವೇ ಸ್ಥಗಿತಗೊಳ್ಳುತ್ತದೆ. ರೈತರು, ವ್ಯಾಪಾರಿಗಳು, ಪ್ರಯಾಣಿಕರು ಏನೂ ಮಾಡಲಾಗದೇ ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಇಷ್ಟಾದರೂ ಸರ್ಕಾರ ಮಾತ್ರ ಸೇತುವೆಗಳ ಎತ್ತರ ಹೆಚ್ಚಿಸುವ ಗೋಜಿಗೆ ಹೋಗಿಲ್ಲ.

ಚಿಕ್ಕೋಡಿ ಉಪ ವಿಭಾಗದ 48 ಸೇತುವೆಗಳು ಕಳೆದ ವರ್ಷ ಜುಲೈನಲ್ಲಿಯೇ ಮುಳುಗಡೆ ಆಗಿದ್ದವು. ಖಾನಾಪುರ ತಾಲ್ಲೂಕಿನ 30ಕ್ಕೂ ಹೆಚ್ಚು ಸೇತುವೆಗಳು ತಿಂಗಳು ಗಟ್ಟಲೇ ಸಂಪರ್ಕ ಕಡಿತಗೊಂಡವು. ಇದರಿಂದ ಕಾಡಂಜಿನ ಜನರ ಬದುಕು ಮುಖ್ಯವಾಹಿನಿಯಿಂದ ದೂರವೇ ಉಳಿಯಿತು. 

ಒಂದು ವರ್ಷದ ಮಳೆಗಾಲ ಮುಗಿಯುವಷ್ಟರಲ್ಲಿ ಜಿಲ್ಲೆಯ 160ಕ್ಕೂ ಹೆಚ್ಚು ಸೇತುವೆಗಳು ಮುಳುಗುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ.

ಜಲಾವೃತಗೊಂಡ ಚಿಕ್ಕೋಡಿ ತಾಲ್ಲೂಕಿನ ದೂಧಗಂಗಾ ನದಿಯ ಮಲಿಕವಾಡ– ದತ್ತವಾಡ ಸೇತುವೆ

ಎತ್ತಿಗೆ ಜ್ವರ ಎಮ್ಮೆಗೆ ಬರೆ...

ಚಿಕ್ಕೋಡಿ ಉಪವಿಭಾಗದ ಬಹುಪಾಲು ಸೇತುವೆಗಳು ಮುಳುಗಡೆ ಆಗುವುದು ಮಹಾರಾಷ್ಟ್ರದ ಮಳೆಯ ಕಾರಣ. ಘಟ್ಟ ಪ್ರದೇಶದಲ್ಲಿ ರಣಭೀಕರ ಮಳೆ ಸುರಿದಾಗಲೆಲ್ಲ ಕೃಷ್ಣಾ ಹಾಗೂ ಉಪನದಿಗಳ ಮಟ್ಟ ಉಕ್ಕೇರುತ್ತದೆ. ಪ್ರವಾಹದ ಜತೆಗೆ ಸೇತುವೆಗಳೂ ಮುಳುಗುತ್ತವೆ. ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಸೇತುವೆಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ‘ಎತ್ತಿಗೆ ಜ್ವರ ಎಮ್ಮೆಗೆ ಬರೆ’ ಗಾದೆ ಮಾತನ್ನು ಚಿಕ್ಕೋಡಿ ಉಪವಿಭಾಗದ ಜನ ಅಕ್ಷರಶಃ ಅನುಭವಿಸುವಂತಾಗಿದೆ.

ಶಿಥಿಲ ಸೇತುವೆಗಳೇ ಹೆಚ್ಚು

ಮೂಡಲಗಿ ತಾಲ್ಲೂಕಿನ ಅವರಾದಿ ಸೇತುವೆ ನೇಸರಗಿ ಮಾರ್ಗದಿಂದ ಕೊಳದೂರಗೆ ಸಂಪರ್ಕಿಸುವ ಕಿರು ಸೇತುವೆ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಯಕ್ಕುಂಡಿ ಹಳ್ಳದ ಕಿರು ಸೇತುವೆ ಗೋಕಾಕ ನಗರದಿಂದ ಗೋಕಾಕ ಜಲಪಾತ ಗೊಡಚಿನಮಲ್ಕಿ ಗೋಕಾಕ ರೋಡ್ ರೈಲ್ವೆ ನಿಲ್ದಾಣ ಹಿಡಕಲ್ ಜಲಾಶಯ ಮೊದಲಾದ ಪ್ರಮುಖ ಸ್ಥಳಗಳನ್ನು ತಲುಪಲು ಕೊಂಡಿಯಾಗಿರುವ ಚಿಕ್ಕೋಳಿ ಸೇತುವೆ ಹುಕ್ಕೇರಿ ತಾಲ್ಲೂಕಿನ ಯರನಾಳ ಬಳಿ ಮತ್ತು ಅವರಗೋಳ– ನೊಗನಿಹಾಳ ಸೇತುವೆಗಳು ಅಪಾಯದ ಮಟ್ಟದಲ್ಲಿವೆ. ಇಂಥ 110ಕ್ಕೂ ಹೆಚ್ಚು ಹಳೆಯ ಸೇತುವೆಗಳಿಗೆ ಕಾಯಕಲ್ಪ ಆಗಬೇಕಿದೆ ಎನ್ನುವುದು ಜನರ ಆಗ್ರಹ.

ಹುಕ್ಕೇರಿ ಸಂಕೇಶ್ವರ ಚಿಕ್ಕೋಡಿ ನಿಪ್ಪಾಣಿ ಮಾರ್ಗದಲ್ಲಿ ಸಂಚರಿಸುವ ಸವಾರರಿಗೂ ಸಂಕಟ ತಪ್ಪಿಲ್ಲ. ಈ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸೇತುವೆಗಳಲ್ಲೂ ನೀರು ನಿಂತು ಸಂಚಾರ ಅಡಚಣೆ ಆಗುತ್ತದೆ. ಬೆಳಗಾವಿ– ಯಮಕನಮರಡಿ ಮಾರ್ಗದಲ್ಲಿ ಎತ್ತರದ ಸೇತುವೆ ನಿರ್ಮಾಣ ಆರಂಭಿಸಿ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಸಂಚಾರ ಸಂಕಷ್ಟ ತಪ್ಪಿಲ್ಲ.
–ಶಿವಪ್ಪ ಆನೆಕಾಲ ರೈತ ಯಮಕನಮರಡಿ
ಈ ವರ್ಷ ಅಥಣಿ ತಾಲ್ಲೂಕಿನಲ್ಲಿ ಇಬ್ಬರು ಹಳ್ಳದ ನೀರಿನಲ್ಲಿ ಮುಳುಗು ಸತ್ತರು. ಕಳೆದ ವರ್ಷ ಮೂಡಲಗಿ ತಾಲ್ಲೂಕಿನಲ್ಲಿ ಬೈಕ್‌ ಸಮೇತ ತೇಲಿಹೋದರು. ಆದರೂ ಸರ್ಕಾರ ಸೇತುವೆಗಳ ಎತ್ತರ ಹೆಚ್ಚಿಸಲು ಮೀನ– ಮೇಷ ಎಣಿಸುತ್ತಿದೆ.
–ಕಿರಣ ಕೊಳವಿ ವಾಹನ ಚಾಲಕ ಅಥಣಿ
ಕಳೆದ ವರ್ಷ ನಾಲ್ಕು ಸೇತುವೆಗಳ ಮರು ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇವು ಟೆಂಡರ್‌ ಹಂತಕ್ಕೆ ಬಂದಿವೆ. ಗೋಕಾಕ– ಲೋಳಸೂರು ಸೇತುವೆ ಪ್ರತಿ ವರ್ಷ ಮುಳುಗುತ್ತದೆ. ಇದನ್ನು ಕಳೆದ ವರ್ಷವೇ ಟೆಂಡರ್‌ ಕರೆಯಲಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ನಿರ್ಮಾಣ ಮಾಡಲಿದೆ.
-ಗಿರೀಶ ದೇಸಾಯಿ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಚಿಕ್ಕೋಡಿ
ಸೇತುವೆಗಳ ಸದ್ಯದ ಪರಿಸ್ಥಿತಿ ಬಗ್ಗೆ ಸರ್ಕಾರದಿಂದ ವರದಿ ಕೇಳಲಾಗಿದೆ. ಬೆಳಗಾವಿ ಭಾಗದ ಐದು ಸೇತುವೆಗಳ ಮರು ನಿರ್ಮಾಣದ ಅಗತ್ಯವಿದೆ ಎಂದು ವರದಿ ನೀಡಿದ್ದೇವೆ. ಸದ್ಯ ಜಿಲ್ಲೆಯ ಜನರಿಂದ ಬೇಡಿಕೆ ಬಂದಿವೆ. ಬಜೆಟ್‌ ಬಂದ ಬಳಿಕ ಎಷ್ಟು ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಗುತ್ತದೆ ನೋಡಿಕೊಂಡು ಕ್ರಮ ವಹಿಸಲಾಗುವುದು.
–ಎಸ್‌.ಎಸ್‌.ಸೊಬರದ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.