ADVERTISEMENT

ಬೆಳಗಾವಿ: ಕೈತಪ್ಪಿದ ಗ್ರಾಹಕರ ಆಯೋಗದ ಪೀಠ- ತೀವ್ರ ಸ್ವರೂಪ ಪಡೆದ ವಕೀಲರ ಧರಣಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 8:26 IST
Last Updated 17 ಜೂನ್ 2022, 8:26 IST
ಬೆಳಗಾವಿಯ ನ್ಯಾಯಾಲಯ ಆವರಣದಲ್ಲಿ ವಕೀಲರು ಶುಕ್ರವಾರ ಧರಣಿ ನಡೆಸಿದರು
ಬೆಳಗಾವಿಯ ನ್ಯಾಯಾಲಯ ಆವರಣದಲ್ಲಿ ವಕೀಲರು ಶುಕ್ರವಾರ ಧರಣಿ ನಡೆಸಿದರು   

ಬೆಳಗಾವಿ: ರಾಜ್ಯ ಗ್ರಾಹಕರ ಆಯೋಗದ ಸಂಚಾರಿ ಪೀಠ ಬೆಳಗಾವಿ ಕೈತಪ್ಪಿದ್ದರಿಂದ ವಕೀಲರು ಆರಂಭಿಸಿದ ಧರಣಿ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂರು ದಿನಗಳಿಂದ ಕೋರ್ಟ್‌ ಕಲಾಪಗಳು ಸ್ಥಗಿತಗೊಂಡಿದ್ದರಿಂದ ಕಕ್ಷಿದಾರರು ಪರದಾಡುವಂತಾಯಿತು.

ಪೀಠ ಕೈತಪ್ಪಲು ಸಚಿವ ಉಮೇಶ ಕತ್ತಿ ಅವರ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ವಕೀಲರು ಆಕ್ರೋಶ ಹೊರಹಾಕಿದರು. ಇನ್ನೊಂದೆಡೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರೂ ಧರಣಿಗೆ ಬೆಂಬಲ ಸೂಚಿಸಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು.

‘ರಾಜ್ಯ ಗ್ರಾಹಕರ ಆಯೋಗದ ಸಂಚಾರಿ ಪೀಠವನ್ನು ಬೆಳಗಾವಿಯಲ್ಲೇ ಸ್ಥಾಪನೆ ಮಾಡಲು ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು’ ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಕೀಲರು ಧರಣಿ ಮುಂದುವರಿಸಿದರು.

ADVERTISEMENT

ಕಲಾಪ ಬಹಿಷ್ಕರಿಸಿದ ಹಲವು ವಕೀಲರು, ‘ಬೆಳಗಾವಿಗೆ ಈ ಪೀಠದ ಅಗತ್ಯತೆ ಹೆಚ್ಚಿದೆ. ಹಾಗಾಗಿ ನಾವೂ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದೆವು. ಆದರೆ, ಕಲಬುರಗಿಯಲ್ಲಿ ಪೀಠ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಸಚಿವ ಉಮೇಶ ಕತ್ತಿ ನಿರ್ಲಕ್ಷ್ಯದಿಂದ ಪೀಠ ಬೆಳಗಾವಿ ಕೈತಪ್ಪಿದೆ’ ಎಂದು ಆರೋಪಿಸಿದರು.

ಶಾಸಕರಾದ ಅಭಯ ಪಾಟೀಲ, ‘ಬೆಳಗಾವಿಯಲ್ಲಿ ಪೀಠ ಸ್ಥಾಪನೆಗಾಗಿ ಸರ್ಕಾರದ ಗಮನಸೆಳೆಯಲು ಜೂನ್‌ 23ರಂದು ಬೆಂಗಳೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ನಿಯೋಗ ಕೊಂಡೊಯ್ಯಲಾಗುವುದು. ನಿಮ್ಮ ಬೇಡಿಕೆ ಈಡೇರಿಸಲು ನಾವು ಬದ್ಧರಿದ್ದೇವೆ. ವಕೀಲರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ’ ಎಂದರು.

ಅನಿಲ ಬೆನಕೆ ಮಾತನಾಡಿ, ‘ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗದ ಸಂಚಾರಿ ಪೀಠ ಸ್ಥಾಪಿಸಲು ಸರ್ಕಾರದಿಂದ ಅನುಮೋದನೆ ಪಡೆಯುವ ವಿಚಾರವಾಗಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಜೊತೆ ಚರ್ಚಿಸಿರುವೆ. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗೋಣ. ನಮ್ಮ ಬೇಡಿಕೆ ಈಡೇರಿದ ನಂತರವೇ ಬೆಳಗಾವಿಗೆ ವಾಪಸ್‌ ಬರೋಣ’ ಎಂದರು.

ಕಾಂಗ್ರೆಸ್‌ ಮುಖಂಡ ಎ.ಬಿ.ಪಾಟೀಲ, ‘ಈ ಹಿಂದೆ ನಾವೂ ಕೈಗೊಂಡ ಹೋರಾಟಕ್ಕೆ ಸ್ಪಂದಿಸಿದ್ದ ಕಾಂಗ್ರೆಸ್‌ ಸರ್ಕಾರ ಬೆಳಗಾವಿಯಲ್ಲಿ ಕೆಎಟಿ ಪೀಠ ಆರಂಭಿಸಿತ್ತು. ಈಗಿನ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗದ ಸಂಚಾರಿ ಪೀಠ ಆರಂಭಿಸಲು ಅನುಮೋದನೆ ನೀಡಬೇಕು. ಕಲಬುರಗಿಗಿಂತ ಬೆಳಗಾವಿ ವಿಭಾಗ ದೊಡ್ಡದು. ಹೀಗಾಗಿ ಇಲ್ಲಿ ಇನ್ನೊಂದು ಪೀಠ ಆರಂಭಿಸಬೇಕು. ಬೇಡಿಕೆ ಈಡೇರುವವರೆಗೂ ಎಲ್ಲರೂ ಒಂದಾಗಿ ಹೋರಾಡೋಣ’ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ, ಸುಧೀರ ಚವ್ಹಾಣ, ಎಂ.ಬಿ.ಝಿರಲಿ, ಮಹಾಂತೇಶ ಪಾಟೀಲ, ಎನ್.ಆರ್‌.ಲಾತೂರ ಇತರರು ನೇತೃತ್ವ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.