ADVERTISEMENT

ಬೆಲಗಮ್ ಮಹಾರಾಷ್ಟ್ರ ವಿವಾದ:ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 12:41 IST
Last Updated 27 ನವೆಂಬರ್ 2025, 12:41 IST
<div class="paragraphs"><p>ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ‘ಬೆಲಗಮ್‌ ಮಹಾರಾಷ್ಟ್ರ’ ಎಂದು ಬರೆದಿರುವ ಜಾಹೀರಾತು</p><p></p></div>

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ‘ಬೆಲಗಮ್‌ ಮಹಾರಾಷ್ಟ್ರ’ ಎಂದು ಬರೆದಿರುವ ಜಾಹೀರಾತು

   

ಬೆಳಗಾವಿ: ಇಲ್ಲಿನ ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ಡಿ.5ರಂದು ಖ್ಯಾತ ಗಾಯಕ ಮಹೇಶ ಕಾಳೆ ಅವರ ಕಾರ್ಯಕ್ರಮ ಆಯೋಜಿಸಿರುವ ಮಹಾರಾಷ್ಟ್ರದ ಕೊಲ್ಹಾಪುರದ ಏಕದಂತ ರಂಗಭೂಮಿ ಸಂಸ್ಥೆಯವರು, ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಜಾಹೀರಾತಿನಲ್ಲಿ ‘ಬೆಲಗಮ್‌ ಮಹಾರಾಷ್ಟ್ರ’ ಎಂದು ಬರೆದಿರುವುದಕ್ಕೆ ಗಡಿ ಕನ್ನಡಿಗರಿಂದ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

‘ಭಾಷೆ ಮೀರಿ ರಾಷ್ಟ್ರಮಟ್ಟದಲ್ಲಿ ಬೆಳೆದವರು ಮಹೇಶ ಕಾಳೆ. ಅಂಥವರ ಸಂಗೀತ ಕಚೇರಿಗೆ ಸಾವಿರಾರು ಸಂಗೀತಪ್ರೇಮಿಗಳು ಸೇರುತ್ತಾರೆ. ಹಾಗಾಗಿ ಏಕದಂತ ರಂಗಭೂಮಿ ಸಂಸ್ಥೆಯವರು ತಕ್ಷಣವೇ ತಪ್ಪು ಸರಿಪಡಿಸಿ, ‘ಬೆಳಗಾವಿ ಕರ್ನಾಟಕ’ ಎಂದು ಬರೆಯಬೇಕು. ಕನ್ನಡ ಭಾಷೆಯಲ್ಲೂ ಕಾರ್ಯಕ್ರಮ ಜಾಹೀರಾತು ಪ್ರಕಟಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

‘ಈಗ ಆಗಿರುವ ಪ್ರಮಾದವನ್ನು ಸಂಘಟಕರು ಕೂಡಲೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಯಾವ ಕಾರಣಕ್ಕೂ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ. ಜತೆಗೆ, ಸಂಘಟಕರ ವಿರುದ್ಧ ನಮ್ಮ ಸಂಘಟನೆಯಿಂದಲೇ ಕಾನೂನಾನಾತ್ಮಕ ಹೋರಾಟ ಮಾಡಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ.

ಕ್ಷಮೆಯಾಚಿಸಿದ ಏಕದಂತ ರಂಗಭೂಮಿ ಸಂಸ್ಥೆ

ಗುರುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಏಕದಂತ ರಂಗಭೂಮಿ ಸಂಸ್ಥೆಯು ಪೋಸ್ಟ್‌ ಹಾಕಿ, ಗಡಿ ಕನ್ನಡಿಗರ ಕ್ಷಮೆಯಾಚಿಸಿದೆ.

‘ಉದ್ದೇಶ ಪೂರ್ವಕವಾಗಿ ನಾವು ತಪ್ಪು ಮಾಡಿಲ್ಲ. ಸಂಗೀತ ಕಚೇರಿಯ ವ್ಯಾಪ್ತಿ ಮತ್ತು ಪ್ರಚಾರಕ್ಕಾಗಿ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಯಲ್ಲಿ ‘ಮಹಾರಾಷ್ಟ್ರ’ ಎಂಬ ಪದವನ್ನು ಹ್ಯಾಶ್‌ಟ್ಯಾಗ್ ಆಗಿ ಸೇರಿಸಿದ್ದೇವೆಯೇ ಹೊರತು, ಬೆಳಗಾವಿಯ ಭೌಗೋಳಿಕ ವ್ಯಾಪ್ತಿ ಸೂಚಿಸಲು ಅಲ್ಲ. ಈ ಬೆಳವಣಿಗೆಗೆ ನಾವು ವಿಷಾದಿಸುತ್ತೇವೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.