ADVERTISEMENT

ಬೆಳಗಾವಿ: ವೇಗ ಪಡೆಯದ ಅಪಾಯಕಾರಿ ಮರಗಳ ತೆರವು ಕಾರ್ಯ!

ಇಮಾಮ್‌ಹುಸೇನ್‌ ಗೂಡುನವರ
Published 4 ಆಗಸ್ಟ್ 2025, 3:06 IST
Last Updated 4 ಆಗಸ್ಟ್ 2025, 3:06 IST
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ನಿಲ್ಲಿಸಿದ್ದ ಎರಡು ಕಾರುಗಳ ಮೇಲೆ ಮರ ಬಿದ್ದಿರುವುದು
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ನಿಲ್ಲಿಸಿದ್ದ ಎರಡು ಕಾರುಗಳ ಮೇಲೆ ಮರ ಬಿದ್ದಿರುವುದು   

ಬೆಳಗಾವಿ: ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಜೋರಾಗಿ ಬೀಸುತ್ತಿರುವ ಗಾಳಿಯಿಂದ ನಗರದ ವಿವಿಧೆಡೆ ಮರ ಬೀಳುತ್ತಲೇ ಇವೆ. ಇದರಿಂದ ಜೀವ ಹಾನಿಯಾಗಿಲ್ಲ. ಆದರೆ, ಜನರು ಕೂದಲೆಳೆ ಅಂತರದಲ್ಲಿ ಪಾರಾಗುತ್ತಿದ್ದಾರೆ. ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. ಆದರೆ, ಅಪಾಯಕಾರಿ ಮರಗಳ ತೆರವು ಕಾರ್ಯ ವೇಗ ಪಡೆದಿಲ್ಲ.

ಬೆಳಗಾವಿ ನಗರದಲ್ಲಿ ಪ್ರತಿವರ್ಷ ಮಳೆ ಬಿರುಸುಗೊಂಡಾಗ, ಮರ ಬಿದ್ದು ಅವಾಂತರ ಸೃಷ್ಟಿಯಾಗುತ್ತಲೇ ಇವೆ. ಮಳೆಗಾಲಕ್ಕೂ ಮುನ್ನ ಇವುಗಳನ್ನು ತೆರವುಗೊಳಿಸಿ ಅನುಕೂಲ ಕಲ್ಪಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿವೆ.

ಈ ಬಾರಿ ಶ್ರೀನಗರ, ಶಾಹೂ ನಗರ, ಸದಾಶಿವ ನಗರ, ಸುಭಾಷ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 30ಕ್ಕೂ ಅಧಿಕ ಮರ ಬಿದ್ದಿವೆ. ಜಿಲ್ಲಾಧಿಕಾರಿ ಕಚೇರಿ ಬಳಿ, ಮರ ಬಿದ್ದು ಎರಡು ಕಾರು ಜಖಂಗೊಂಡಿವೆ. ಮರಗಳು ಧರೆಗುರುಳಿ ವಿದ್ಯುತ್‌ ಪರಿಕರಗಳಿಗೂ ಹಾನಿಯಾಗುತ್ತಿದೆ.

ADVERTISEMENT

ಇದೇ ತಿಂಗಳು ಅದ್ದೂರಿಯಾಗಿ ಜರುಗಲಿರುವ ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜಾಗುತ್ತಿದೆ. ಅಷ್ಟರೊಳಗೆ ಅಪಾಯಕಾರಿ ಮರಗಳನ್ನು ತ್ವರಿತವಾಗಿ ತೆರವು ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.

25 ಮರಗಳಷ್ಟೇ ಪೂರ್ಣ ತೆರವು: 

ನಗರದಲ್ಲಿ ಅಪಾಯಕಾರಿ ಹಂತದಲ್ಲಿರುವ ಮರಗಳ ತೆರವಿಗಾಗಿ ಪಾಲಿಕೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಒಳಗೊಂಡ ಎಂಟು ತಂಡ ರಚಿಸಲಾಗಿತ್ತು. ಜೂನ್‌ ಅಂತ್ಯದಲ್ಲಿ ಸಮೀಕ್ಷೆ ಕೈಗೊಂಡು, ಅಪಾಯಕಾರಿಯಾದ 181 ಮರ ಗುರುತಿಸಲಾಗಿತ್ತು. ಈ ಪೈಕಿ ಈವರೆಗೆ 25 ಮರಗಳನ್ನು ಪೂರ್ಣವಾಗಿ ತೆರವುಗೊಳಿಸಿದ್ದರೆ, 35 ಮರಗಳ ಟೊಂಗೆ ಕತ್ತರಿಸಲಾಗಿದೆ.

‘ಕಾಲೇಜು ರಸ್ತೆ, ಕಾಂಗ್ರೆಸ್‌ ರಸ್ತೆ, ವಿಶ್ವೇಶ್ವರಯ್ಯ ನಗರ, ಸುಭಾಷ ನಗರ, ಹನುಮಾನ ನಗರ, ಅಶೋಕ ನಗರ ಮತ್ತಿತರ ಬಡಾವಣೆಯಲ್ಲಿನ ಅಪಾಯಕಾರಿ ಮರಗಳು ಮತ್ತು ಟೊಂಗೆ ತೆರವು ಮಾಡಿದ್ದೇವೆ. ಸಹ್ಯಾದ್ರಿ ನಗರ, ಶಾಹೂನಗರ, ರಾಮತೀರ್ಥ ನಗರ, ಮಹಾಂತೇಶ ನಗರ, ಭಾಗ್ಯನಗರ, ಹಿಂದವಾಡಿ, ಟಿಳಕವಾಡಿಯಲ್ಲಿನ ಮರ ತೆರವಿಗೆ ಕ್ರಮ ವಹಿಸಿದ್ದೇವೆ’ ಎಂದು ಪಾಲಿಕೆಯ ತೋಟಗಾರಿಕೆ ನಿರೀಕ್ಷಕ ರಿಜ್ವಾನ್‌ ನಾಲತವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇರುಗಳಿಗೆ ಕುತ್ತು!: 

‘ಕುಡಿಯುವ ನೀರು ಸರಬರಾಜು ಕಾಮಗಾರಿಗಾಗಿ ಎಲ್‌ ಆ್ಯಂಡ್‌ ಟಿ ಕಂಪನಿಯವರು ಬೆಳಗಾವಿಯ ಹಲವೆಡೆ ರಸ್ತೆ ಅಗೆಯುತ್ತಿದ್ದಾರೆ. ಆಗ ಕೆಲವು ಮರಗಳ ಬೇರು ಸಡಿಲಗೊಂಡು ಬೀಳುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಮರಗಳಿಗೆ ಧಕ್ಕೆ ಬಾರದಂತೆ ಕಾಮಗಾರಿ ಕೈಗೊಳ್ಳುವಂತೆ ಅವರಿಗೂ ಸೂಚಿಸಿದ್ದೇವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಮತ್ತೊಮ್ಮೆ ಸಭೆ ನಡೆಸುತ್ತೇನೆ: ಮೇಯರ್‌

‘ಬೆಳಗಾವಿಯಲ್ಲಿ ಅಪಾಯಕಾರಿ ಹಂತದಲ್ಲಿನ ಮರಗಳನ್ನು ತೆರವುಗೊಳಿಸುವಂತೆ ಪಾಲಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಹಂತ– ಹಂತವಾಗಿ ಅವರು ಮರ ತೆರವುಗೊಳಿಸುತ್ತಿದ್ದಾರೆ. ಈವರೆಗೆ ತೆರವುಗೊಳಿಸಿದ ಮರಗಳ ವರದಿ ಪಡೆದುಕೊಂಡು ಸ್ವತಃ ಸ್ಥಳಕ್ಕೆ ಹೋಗಿ ವಾಸ್ತವ ಸ್ಥಿತಿ ಪರಿಶೀಲಿಸುತ್ತಿದ್ದೇನೆ. ಉಳಿದ ಮರಗಳನ್ನು ತೆರವುಗೊಳಿಸುವ ಸಂಬಂಧ ಮತ್ತೊಮ್ಮೆ ಸಭೆ ನಡೆಸುತ್ತೇನೆ’ ಎಂದು ಮೇಯರ್‌ ಮಂಗೇಶ ಪವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಸರ್ಜನೆ ಮೆರವಣಿಗೆಗೂ ಮುನ್ನ ತೆರವು ಪೂರ್ಣ’

‘ಸಮೀಕ್ಷೆ ಮುಗಿದ ಮೂರು ತಿಂಗಳ ಒಳಗೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಇದಕ್ಕಾಗಿ ಪ್ರಯತ್ನ ನಡೆಸಿದ್ದೇವೆ. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗೂ ಮುನ್ನ ನಗರದಲ್ಲಿನ ಎಲ್ಲ ಅಪಾಯಕಾರಿ ಮರಗಳ ತೆರವು ಪ್ರಕ್ರಿಯೆ ಮುಗಿಯಲಿದೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಹನುಮಂತ ಕಲಾದಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸತತ ಮಳೆಯಿಂದ ಬೆಳಗಾವಿಯಲ್ಲಿ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸುತ್ತಿರುವುದು
ಬೆಳಗಾವಿಯ ಸದಾಶಿವ ನಗರದ ಮುಖ್ಯ ರಸ್ತೆಯಲ್ಲಿ ಮರವೊಂದು ವಿದ್ಯುತ್‌ ಪರಿವರ್ತಕಕ್ಕೆ ತಾಗಿಕೊಂಡಿರುವುದು   ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ 
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಮರವೊಂದು ಬೀಳುವ ಸ್ಥಿತಿಯಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.